ನವದೆಹಲಿ: ಕರ್ನಾಟಕಕ್ಕೆ ನಿತ್ಯ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಸುವಂತೆ ಹೈಕೋರ್ಟ್ ನೀಡಿದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ. ಮೇಲ್ಮನವಿ ಅರ್ಜಿಯನ್ನು ಕೋರ್ಟ್ ವಜಾ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ತೀವ್ರ ಮುಖಭಂಗವಾಗಿದೆ.
ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ನ್ಯಾ. ಚಂದ್ರಚೂಡ್ ನೇತೃತ್ವದ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತು. ವಿಚಾರಣೆ ವೇಳೆ ಕರ್ನಾಟಕ ಹೈಕೋರ್ಟ್ ಅತ್ಯುತ್ತಮ ಆದೇಶ ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿತು.
ರಾಜ್ಯದಲ್ಲಿ ಜನರು ಆಕ್ಸಿಜನ್ ಕೊರತೆಯಿಂದ ಸಾಯುತ್ತಿರುವುದನ್ನು ನೋಡಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ. ಹೈಕೋರ್ಟ್ ನೀಡಿರುವ ಆದೇಶಕ್ಕೆ ನಾವು ತಡೆ ನೀಡುವುದಿಲ್ಲ. ಒಂದು ವೇಳೆ ತಡೆ ನೀಡಿದರೆ ಕರ್ನಾಟಕದ ಜನರು ಆಕ್ಸಿಜನ್ ಇಲ್ಲದೇ ತತ್ತರಿಸಿ ಹೋಗಲಿದ್ದಾರೆ. ಹೀಗಾಗಿ ಕರ್ನಾಟಕಕ್ಕೆ ಆಕ್ಸಿಜನ್ ಕೋಟಾವನ್ನು ನಾಲ್ಕು ದಿನಗಳಲ್ಲಿ ಹೆಚ್ಚಿಸಬೇಕು ಎಂದು ಸೂಚಿಸಿತು.
ಕೇಂದ್ರದ ವಾದ ಏನಿತ್ತು?
ನಾವು ಕರ್ನಾಟಕದೊಂದಿಗೆ ಯಾವುದೇ ವಿರೋಧ ಹೊಂದಿಲ್ಲ. ಕರ್ನಾಟಕ ಹೈಕೋರ್ಟ್ ಆದೇಶದ ಬಗ್ಗೆ ನಮಗೆ ಕಾಳಜಿ ಇದೆ. ಪ್ರತಿ ಹೈಕೋರ್ಟ್ ಆಕ್ಸಿಜನ್ ಪೂರೈಕೆ ಬಗ್ಗೆ ಸೂಚನೆಗಳನ್ನು ನೀಡಲು ಪ್ರಾರಂಭಿಸಿದರೆ ದೇಶಾದ್ಯಂತ ಅವ್ಯವಸ್ಥೆಗೆ ಕಾರಣವಾಗಬಹುದು. ಇದು ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟದಲ್ಲಿ ಬಾಹ್ಯ ಒತ್ತಡ ಸೃಷ್ಟಿಸುತ್ತದೆ. ಆಕ್ಸಿಜನ್ ಪೂರೈಕೆಯಲ್ಲಿ ಸಮಸ್ಯೆ ಉದ್ಭವಿಸುತ್ತಿದೆ. ನಮ್ಮಲ್ಲಿ ಸೀಮಿತ ಪ್ರಮಾಣದ ಆಮ್ಲಜನಕವಿದ್ದು, ಆಕ್ಸಿಜನ್ ಕೊರತೆ ರಾಷ್ಟ್ರೀಯ ಸಮಸ್ಯೆಯಾಗಿದೆ. ಏಕಾಏಕಿ ಆಕ್ಸಿಜನ್ ಪೂರೈಸಲು ಸಾಧ್ಯವಿಲ್ಲದ ಕಾರಣ ಹೈಕೋರ್ಟ್ ಆದೇಶಕ್ಕೆ ತಡೆ ನೀಡಬೇಕು. ನಾವು ರಾಜ್ಯ ಸರ್ಕಾರದೊಂದಿಗೆ ಚರ್ಚೆ ಮಾಡುತ್ತೇವೆ. ಈ ನಿಟ್ಟಿನಲ್ಲಿ ನಾವು ಎಲ್ಲ ಅತ್ಯುತ್ತಮ ಪ್ರಯತ್ನಗಳನ್ನು ಮಾಡುತ್ತೇವೆ.
ಸುಪ್ರೀಂಕೋರ್ಟ್ ಹೇಳಿದ್ದು ಏನು?
ರಾಜ್ಯದಲ್ಲಿ 3.90 ಲಕ್ಷ ಸಕ್ರೀಯ ಪ್ರಕರಣಗಳಿದ್ದು, ಕನಿಷ್ಠ 1700 ಮೆಟ್ರಿಕ್ ಟನ್ ಆಮ್ಲಜನಕದ ಅವಶ್ಯಕತೆ ಇದೆ. ಜನರು ಆಮ್ಲಜನಕದ ಕೊರತೆಯಿಂದ ಸಾಯುತ್ತಿರುವಾಗ ಹೈಕೋರ್ಟ್ ಮೌನವಾಗಿರಲು ಸಾಧ್ಯವಿಲ್ಲ. ನಾವು ಇದರಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ, ಹೈಕೋರ್ಟ್ ಆದೇಶಕ್ಕೆ ತಡೆ ನೀಡುವುದಿಲ್ಲ. ಆರ್ಟಿಕಲ್ 226 ರ ಅಡಿಯಲ್ಲಿ ಹೈಕೋರ್ಟ್ ತನ್ನ ಅಧಿಕಾರ ಬಳಕೆ ಮಾಡಿಕೊಂಡಿದೆ. ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶ ತಪ್ಪಲ್ಲ. ಕರ್ನಾಟಕದ ಜನರನ್ನು ಕಷ್ಟಕ್ಕೆ ದೂಡಲು ಸಾಧ್ಯವಿಲ್ಲ.
ನಾವು ಆದೇಶಕ್ಕೆ ತಡೆ ನೀಡಿದರೆ ಕರ್ನಾಟಕದ ಜನರು ತತ್ತರಿಸಿ ಹೋಗಲಿದ್ದಾರೆ. ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶ ಸರಿ ಇದೆ. 4 ದಿನಗಳಲ್ಲಿ ರಾಜ್ಯದ ಮನವಿಯನ್ನು ಪರಿಗಣಿಸಿ, ಅಲ್ಲಿಯವರೆಗೂ ತಕ್ಷಣ ಜಾರಿ ಬರುವಂತೆ ದಿನಕ್ಕೆ 1200 ಮೆ.ಟನ್. ಹೆಚ್ಚಿಸಿ. ನಾವು ಆಕ್ಸಿಜನ್ ಕೊರತೆ ಸಂಬಂಧ ಸಮಿತಿ ರಚಿಸುವುದಾಗಿ ಹೇಳಿದ್ದೇವೆ. ಆದರೆ ಅಲ್ಲಿಯವರೆಗೂ ಹೈಕೋರ್ಟ್ ಗಳಿಗೆ ಕಣ್ಣು ಮುಚ್ಚಿಕೊಂಡು ಇರಿ ಎಂದು ಹೇಳಲು ಸಾಧ್ಯವಿಲ್ಲ. ದೆಹಲಿ ಹೈಕೋರ್ಟ್‍ನ ಆದೇಶದಲ್ಲಿ ನಾವು ಮಧ್ಯಪ್ರವೇಶಿಸಿದ್ದೇವೆ. ಆದರೆ ಇಲ್ಲಿ ಪ್ರವೇಶ ಮಾಡುವುದಿಲ್ಲ.