ಹಾಸನ: ಅರುಣಾಚಲ ಪ್ರದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಜಿಲ್ಲೆಯ ಅರಕಲಗೂಡು ತಾಲೂಕಿನ ಯೋಧರೊಬ್ಬರು ಗುಡ್ಡ ಕುಸಿದು ಶನಿವಾರ ಮೃತಪಟ್ಟಿದ್ದಾರೆ.
ಅತ್ನಿ ಗ್ರಾಮದ 38 ವರ್ಷದ ಮಲ್ಲೇಶ್ ಮೃತ ಯೋಧ. ಮಲ್ಲೇಶ್ ಕಳೆದ 17 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಲ್ಲೇಶ್ ಅವರ ಕರ್ತವ್ಯದ ಅವಧಿ ಕೊನೆಗೊಂಡಿದ್ದರೂ ದೇಶ ಸೇವೆ ಮಾಡುವ ಹಂಬಲದಿಂದ ಮತ್ತೆ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
Advertisement
Advertisement
ಗಡಿ ಭಾಗಕ್ಕೆ ಸಾಮಾಗ್ರಿಗಳನ್ನು ಸಾಗಿಸುತ್ತಿದ್ದ ಪೆಟ್ರೋಲ್ ಬಂಕರ್ ವಾಹನದಲ್ಲಿ ತೆರಳುತ್ತಿದ್ದ ವೇಳೆ ಗುಡ್ಡ ಕುಸಿದು ಯೋಧ ಮಲ್ಲೇಶ್ ತೀವ್ರವಾಗಿ ಗಾಯಗೊಂಡಿದ್ದರು. ತಕ್ಷಣ ಗಾಯಾಳು ಯೋಧರನ್ನು ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯೋಧ ಮಲ್ಲೇಶ್ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
Advertisement
ವೀರಯೋಧ ಮಲ್ಲೇಶ್ ಅತ್ನಿ ಗ್ರಾಮದ ನಿವಾಸಿ ದಿ. ಮಲ್ಲೇಗೌಡ ಮತ್ತು ಪುಟ್ಟಮ್ಮ ದಂಪತಿಯ ಕೊನೆಯ ಪುತ್ರರಾಗಿದ್ದಾರೆ. ಯೋಧ ಪತ್ನಿ ಪೂರ್ಣಿಮಾ, ಮಕ್ಕಳಾದ ಋತ್ವಿಕ್, ಸಹನ್‍ರನ್ನು ಅಗಲಿದ್ದಾರೆ. ದೇಶಕ್ಕಾಗಿ ಮಡಿದ ಯೋಧನ ಸ್ವಗ್ರಾಮದಲ್ಲಿ ದುಃಖ ಮಡುಗಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸೋಮವಾರ ಸಂಜೆ ಅಥವಾ ಮಂಗಳವಾರ ಪಾರ್ಥಿವ ಶರೀರವನ್ನು ಸ್ವಗ್ರಾಮಕ್ಕೆ ತರುವುದಾಗಿ ಮೂಲಗಳು ತಿಳಿಸಿವೆ.