– ಕೊರೊನಾ ವಿರುದ್ಧ ದಣಿವರಿಯದೆ ಕೆಲಸ ಮಾಡಿದ್ದ ಶಿವಕಿರಣ್
ಹಾಸನ: ಕೊರೊನಾ ವಿರುದ್ಧ ಧಣಿವರಿಯದೆ ಕೆಲಸ ಮಾಡಿದ್ದ ವೈದ್ಯರೊಬ್ಬರು ಕರ್ತವ್ಯದಲ್ಲಿದ್ದಾಗಲೇ ಅನಾರೋಗ್ಯದಿಂದ ಕುಸಿದು ಬಿದ್ದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಘಟನೆ ಹಾಸನದಲ್ಲಿ ನಡೆದಿದೆ.
ಜಿಲ್ಲೆಯ ಆಲೂರು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಶಿವಕಿರಣ್ ಮೃತ ದುರ್ದೈವಿ ಡಾಕ್ಟರ್. ಕೊರೊನಾ ವಿರುದ್ಧ ವೈದ್ಯ ಶಿವಕಿರಣ್ ರಜೆಯಿಲ್ಲದೇ ನಿರಂತರವಾಗಿ ಕೆಲಸ ಮಾಡಿದ್ದರು. ಕೆಲಸದ ಸಮಯದಲ್ಲಿ ತಲೆನೋವಿನಿಂದ ಬಳಲಿದ್ದ ವೈದ್ಯ ಶಿವಕಿರಣ್ ಸಹೋದ್ಯೋಗಿಗಳ ಬಳಿ ಈ ಬಗ್ಗೆ ಹೇಳಿಕೊಂಡಿದ್ದರು. ಆದರೆ ಕಳೆದು ಐದು ದಿನದ ಹಿಂದೆ ಕರ್ತವ್ಯದಲ್ಲಿದ್ದಾಗಲೇ ಶಿವಕಿರಣ್ ತಲೆ ಸುತ್ತಿ ಬಿದ್ದಿದ್ದರು.
ತಕ್ಷಣ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. 5 ದಿನ ವೆಂಟಿಲೇಶನ್‍ನಲ್ಲಿ ಇದ್ದ ವೈದ್ಯ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗೆ ಸಾವನ್ನಪ್ಪಿದ್ದಾರೆ. ಕೊರೊನಾ ಸಮಯದಲ್ಲಿ ಕೆಲಸದ ಒತ್ತಡವೇ ಸಾವಿಗೆ ಕಾರಣ ಎಂಬ ಆರೋಪ ಕೇಳಿಬಂದಿದೆ. ಮೃತ ವೈದ್ಯರ ಕೊರೊನಾ ಟೆಸ್ಟ್ ಮಾಡಲಾಗಿದ್ದು, ವರದಿಯಲ್ಲಿ ನೆಗೆಟಿವ್ ಬಂದಿದೆ.