– ಬೆಂಗಳೂರಲ್ಲಿ ಎರಡು ದಿನ ಹೆಚ್ಚು ಮಳೆ ಸಾಧ್ಯತೆ
– ಇಂದಿನಿಂದ ರಾಜ್ಯಾದ್ಯಂತ ಭಾರೀ ಮಳೆ
ಬೆಂಗಳೂರು: ರಾಜ್ಯದ ಕರಾವಳಿ ಭಾಗದಲ್ಲಿ ಇಂದು ಗುಡುಗು ಸಿಡಲು ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಈಗಾಗಲೇ ಕರಾವಳೆಯ ಕೆಲ ಜಿಲ್ಲಗಳಲ್ಲಿ ಮಳೆಯ ಅಬ್ಬರ ಶುರುವಾಗಿದೆ.
ಜೂನ್ 12 ರಿಂದ ಒಂದು ವಾರದ ಕಾಲ ಗುಡುಗುಸಹಿತ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಅಲ್ಲದೆ ಇಂದಿನಿಂದ ರಾಜ್ಯಾದ್ಯಂತ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹಲವು ಕಡೆ ಮೋಡ ಕವಿದ ವಾತಾವರಣವಿರುತ್ತದೆ. ಉತ್ತರ ಒಳನಾಡು, ದಕ್ಷಿಣ ಒಳನಾಡಿನಲ್ಲಿ ಜೂನ್ 12 ರಿಂದ 16ರ ವರೆಗೆ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ, ಗದಗ, ಕೋಲಾರ, ಕೊಪ್ಪಳ, ದಾವಣಗೆರೆ ಹಾಗೂ ತುಮಕೂರಿನಲ್ಲಿ ಅತಿ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇದನ್ನೂ ಓದಿ: ನೈಋತ್ಯ ಮುಂಗಾರು ಚುರುಕು- ಉಡುಪಿಯಲ್ಲಿ ಗಾಳಿ ಮಳೆ
ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರ ಗುಡುಗು, ಮಿಂಚು ಸಹಿತ ಭಾರೀ ಗಾಳಿ ಮಳೆಯ ಮುನ್ಸೂಚನೆ ನೀಡಿದೆ. ಇಂದಿನಿಂದ ನಾಲ್ಕು ದಿನಗಳ ಕಾಲ ಪ್ರತೀ 24 ತಾಸುಗಳಲ್ಲಿ ಜಿಲ್ಲೆಯಲ್ಲಿ 64 ರಿಂದ 115 ಮಿ.ಮೀ. ಮಳೆಯಾಗುವ ನಿರೀಕ್ಷೆ ಇದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಅದರಂತೆ ಉಡುಪಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ.
ತಾಸಿಗೆ 30-40 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿರುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಉಡುಪಿ ಜಿಲ್ಲೆಯ ಕಾರ್ಕಳ, ಕುಂದಾಪುರ, ಕಾಪು, ಬ್ರಹ್ಮಾವರ, ಬೈಂದೂರು, ಹೆಬ್ರಿ, ಉಡುಪಿ ಎಲ್ಲಾ ತಾಲೂಕುಗಳಲ್ಲಿಯೂ ವ್ಯಾಪಕ ಮಳೆ ಸುರಿಯುತ್ತಿದೆ. ಇದರಿಂದ ಭತ್ತದ ಬೇಸಾಯ ಆರಂಭಿಸಲು ಕಾದಿದ್ದ ಕೃಷಿಕರಿಗೆ ಅನುಕೂಲವಾಗಿದೆ.