ಮಂಗಳೂರು: ರಾಜ್ಯದ ಕರಾವಳಿಯಲ್ಲಿ ವಿವಿಧ ಅಭಿವೃದ್ದಿ ಯೋಜನೆಯ ಹೆಸರಿನಲ್ಲಿ ಈಗಾಗಲೇ ಹಲವು ಕೈಗಾರಿಕೆಗಳು, ಪೈಪ್‍ಲೈನ್, ವಿದ್ಯುತ್ ಯೋಜನೆಗಳು ತಲೆ ಎತ್ತಿದೆ. ಇದರಿಂದ ನಲುಗಿರುವ ಕರಾವಳಿಯ ಜನರಿಗೆ ಇದೀಗ ಇನ್ನೊಂದು ಶಾಕ್ ಎದುರಾಗಿದೆ. ಉಡುಪಿ ಜಿಲ್ಲೆಯ ಪಡುಬಿದ್ರೆಯಲ್ಲಿರುವ ಯು.ಪಿ.ಸಿ.ಎಲ್ ವಿದ್ಯುತ್ ಉತ್ಪಾದನಾ ಘಟಕದಿಂದ ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಕೇರಳದ ಕಾಸರಗೋಡು ಪ್ರವೇಶಿಸುವ ವಿದ್ಯುತ್ ಮಾರ್ಗ ನಿರ್ಮಾಣ ಯೋಜನೆ ಶುರುವಾಗಿದೆ.
ಈಗಾಗಲೇ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಕೊಲ್ಲಪದವು ಖಾಸಗಿಯವರ ಕುಮ್ಕಿ ಜಾಗದಲ್ಲಿ ಯಾವುದೇ ಮಾಹಿತಿ ನೀಡದೆ, ಸರ್ವೇ ಕಾರ್ಯ ನಡೆಸಿ ರಸ್ತೆ ನಿರ್ಮಾಣ ಮಾಡಿ ಟವರ್ ನಿರ್ಮಾಣಕ್ಕೆ ಆಳೆತ್ತರದ ಗುಂಡಿಯನ್ನು ತೆಗೆಯಲಾಗಿದೆ ಎಂದು ಸ್ಥಳೀಯ ನಿವಾಸಿ ಭಾಸ್ಕರ್ ಉಪಾದ್ಯಾಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತರ ಕೇರಳದ ವಿದ್ಯುತ್ ಸಮಸ್ಯೆ ನಿವಾರಣೆ ಹಾಗೂ ದಕ್ಷಿಣ ಭಾರತದ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ಮಾರ್ಗದ ಲೋಡ್ ನಿವಾರಣೆಯ ದೃಷ್ಟಿಯಿಂದ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 847 ಕೋಟಿ ರೂ ವೆಚ್ಚದ ಯೋಜನೆ ಇದಾಗಿದ್ದು, 400 ಕೆ.ವಿ ಸಾಮಥ್ರ್ಯದ ವಿದ್ಯುತ್ ಮಾರ್ಗ ನಿರ್ಮಾಣ ಮಾಡಲಾಗುತ್ತೆ. ವಿದ್ಯುತ್ ಮಾರ್ಗ ಸಾಗುವ ಉಡುಪಿ, ದಕ್ಷಿಣ ಕನ್ನಡ, ಕಾಸರಗೋಡು ಜಿಲ್ಲೆಗಳಲ್ಲಿ 310 ಕಡೆ ಫೌಂಡೇಶನ್ ನಿರ್ಮಾಣವಾಗಲಿದೆ. ಇದರಲ್ಲಿ 127 ಟವರ್ ಗಳು ಕೇರಳ ವ್ಯಾಪ್ತಿಯಲ್ಲಿ ಹಾಗೂ 183 ಕರ್ನಾಟಕ ವ್ಯಾಪ್ತಿಯಲ್ಲಿ ಇರಲಿದೆ. ಹೀಗಾಗಿ ವಿದ್ಯುತ್ ಮಾರ್ಗ ಸಾಗುವ ಪ್ರದೇಶದ ಜನರು ಆತಂಕಕ್ಕೆ ಒಳಗಾಗಿದ್ದಾರೆ.
ಈ ಬಗ್ಗೆ ಸಭೆ ನಡೆಸಿ ಜನರಿಂದ ಬಂದಿರುವ ದೂರುಗಳನ್ನು ಪರಿಶೀಲಿಸಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದ್ದಾರೆ. ಒಟ್ಟಿನಲ್ಲಿ ಸಾರ್ವಜನಿಕ ಜನಜೀವನಕ್ಕೆ ತೊಂದರೆಯಾಗದಂತೆ ಯೋಜನೆಗಳ ಜಾರಿಯಾಗಬೇಕು ಎಂಬುದೇ ಜನರ ಒತ್ತಾಯ.