-ಕರಾವಳಿ ಭಾಗದಲ್ಲಿ ಪಿಂಕ್ ಸಿಟಿ ಯೋಜನೆಗೆ ರೂಪುರೇಷೆ ಸಿದ್ದ
ಕಾರವಾರ: ಕರಾವಳಿ ಭಾಗದಲ್ಲಿ ಅಭಿವೃದ್ಧಿಗಾಗಿ 14 ಕೋಟಿ ರೂಪಾಯಿ ಆ್ಯಕ್ಷನ್ ಪ್ಲಾನ್ ಮಾಡಲಾಗಿದೆ. ಸೋಲಾರ್ ಯಂತ್ರಗಳ ಮೂಲಕ ಆಧುನಿಕ ತಂತ್ರಜ್ಞಾನದಲ್ಲಿ ಮೀನು ಒಣಗಿಸುವ ತರಬೇತಿಯನ್ನು ಕಾರವಾರ ಮೀನುಗಾರರಿಗೆ ನೀಡಲಾಗುವುದು ಎಂದು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಹೇಳಿದ್ದಾರೆ.
ಕಾರವಾರದ ಪ್ರವಾಸಿ ಮಂದಿರದಲ್ಲಿ ಗುರುವಾರ ಪ್ರಾಧಿಕಾರದ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಮಟ್ಟಾರು ರತ್ನಾಕರ ಅವರು, ಕೇಂದ್ರ ಸರ್ಕಾರದ ಆತ್ಮ ನಿರ್ಬರ ಕಾರ್ಯಕ್ರಮದಡಿ ಸ್ವ ಉದ್ಯೋಗ ತರಬೇತಿ ನೀಡುತ್ತಿದ್ದೇವೆ. ಅದರಲ್ಲಿ ಒಣ ಮೀನು ತಯಾರಿಸುವ ಆಧುನಿಕ ವಿಧಾನದ ಬಗ್ಗೆ ಮಂಗಳೂರು, ಉಡುಪಿಯಲ್ಲಿ ಈಗಾಗಲೇ ಯಶಸ್ವಿ ತರಬೇತಿ ನೀಡಲಾಗಿದೆ. ಈಗ ಸಾಂಪ್ರದಾಯಿಕ ಪದ್ಧತಿಯಲ್ಲಿ ಒಣಗಿಸುವ ಮೀನು ಬೇಗ ಹಾಳಾಗುತ್ತದೆ. ಆಧುನಿಕ ತಂತ್ರಜ್ಞಾನದಲ್ಲಿ ಸೋಲಾರ್ ಮೂಲಕ ಮೀನು ಸಂಸ್ಕರಿಸಿದಲ್ಲಿ ವಿದೇಶಕ್ಕೆ ರಫ್ತು ಮಾಡಲೂ ಅವಕಾಶವಿದೆ ಎಂದರು.
ಕಾರವಾರ ಮಾಜಾಳಿಯಿಂದ ಕೇರಳ, ಕಾಸರಕೋಡಿನವರೆಗೆ 370 ಕಿಮೀ ರಾಷ್ಟ್ರೀಯ ಹೆದ್ದಾರಿಗೆ ಪರ್ಯಾಯ ರಸ್ತೆ ಮಾಡುವ ಎರಡು ವರ್ಷದ ಯೋಜನೆಗೆ ಮರು ಜೀವ ಬಂದಿದೆ. 1,200 ಕೋಟಿ ರೂಪಾಯಿ ವೆಚ್ಚದ ಡಿಪಿಆರ್ ಸಿದ್ಧಮಾಡಲಾಗುತ್ತದೆ. ಹೆದ್ದಾರಿ ನಡುವೆ “ಪಿಂಕ್‍ಸಿಟಿ” ಎಂಬ ಗಿಡ ಬೆಳೆಯಲು ಯೋಜನೆ ರೂಪಿಸಿದ್ದೇವೆ. ಇದು ಹೆದ್ದಾರಿಯ ಸೌಂದರ್ಯ ಹೆಚ್ಚಿಸುವ ಜೊತೆ ಆದಾಯವೂ ಬರಲಿದೆ. ಗಿಡದಲ್ಲಿ ಹಳದಿ ಹೂವು ಬಿಡಲಿದ್ದು, ಮೆಣಸಿನ ಕಾಳಿನ ಸ್ವರೂಪದ ಕಾಳು ಬಿಡಲಿದೆ. ಅದನ್ನು ಕೊಯ್ದು ಆದಾಯ ಗಳಿಸಬಹುದು. ಯೋಜನೆಗೆ ಹೆದ್ದಾರಿ ಪ್ರಾಧಿಕಾರದ ಅನುಮತಿ ಬೇಕಿದೆ ಎಂದು ಮಾಹಿತಿ ಹಂಚಿಕೊಂಡರು.
ಮಚ್ಚಳ್ಳಿ ರಸ್ತೆ ಅಭಿವೃದ್ಧಿ
ಈ ಹಿಂದೆ ಪಬ್ಲಿಕ್ ಟಿವಿ ವರದಿ ಮಾಡಿದ ಮಚ್ಚಳ್ಳಿ ಗ್ರಾಮದ ಸಮಸ್ಯೆ ಕುರಿತು ಪ್ರತಿಕ್ರಿಯಿಸಿ, ಅಮದಳ್ಳಿ ಗ್ರಾಪಂ ವ್ಯಾಪ್ತಿಯ ಮಚ್ಚಳ್ಳಿ ಕುಗ್ರಾಮಕ್ಕೆ ಅರಣ್ಯ ಇಲಾಖೆ ಅನುಮತಿ ಪಡೆದು ರಸ್ತೆ ನಿರ್ಮಾಣಕ್ಕೆ ಪ್ರಯತ್ನ ಮಾಡಲಾಗುವುದು ಎಂದು ರತ್ನಾಕರ ಹೆಗ್ಡೆ ಭರವಸೆ ನೀಡಿದರು. ಇದನ್ನೂ ಓದಿ: ಕಡಲ ಅಬ್ಬರ, ಏಂಡಿ ಬಲೆಗೆ ಸಿಕ್ತು ರಾಶಿ-ರಾಶಿ ಮೀನು
ಗ್ರಾಮದ ರಸ್ತೆ ಪರಿಶೀಲನೆ ನಡೆಸಿದ್ದೇನೆ. ಗ್ರಾಮಕ್ಕೆ ತೆರಳುವ 7 ಕಿಮೀ ಕಚ್ಚಾ ರಸ್ತೆಯಲ್ಲಿ 3 ಕಿಮೀ ರಸ್ತೆಯನ್ನು ಶಾಸಕಿ ರೂಪಾಲಿ ನಾಯ್ಕ ಮಾಡಿಸಿದ್ದಾರೆ. ಇನ್ನು 4 ಕಿಮೀ ರಸ್ತೆಗೆ ಲೋಕೋಪಯೋಗಿ ಇಲಾಖೆಯು 14 ಕೋಟಿ ರೂಪಾಯಿಗಳ ಯೋಜನಾ ವರದಿ ತಯಾರಿಸಿದೆ. ಅನುದಾನ ತಂದರೂ ಅರಣ್ಯ ಇಲಾಖೆಯ ಆಕ್ಷೇಪ ಇರುವುದರಿಂದ ಅರಣ್ಯ ಅನುಮತಿ ಪಡೆದು ರಸ್ತೆ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಈಗಾಗಲೇ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಮಂಡಳಿಯಾಗಿ ಮಾರ್ಪಡಿಸುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.
ಸಭೆಯಲ್ಲಿ ಶಾಸಕಿ ರೂಪಾಲಿ ನಾಯ್ಕ, ಸದಸ್ಯರಾದ ವಿಜಯಕುಮಾರ ನಾಯ್ಕ, ಮಂಜುನಾಥ ಜನ್ನು, ಕಾರ್ಯದರ್ಶಿ ಪ್ರದೀಪ ಡಿಸೋಜಾ, ಜಿಪಂ ಸಿಇಒ ಪ್ರಿಯಾಂಕಾ ಎಂ ಪಾಲ್ಗೊಂಡಿದ್ದರು.