ಕರಾವಳಿಯಲ್ಲಿ ಕೆರಳಿ ಕನಲಿದ ನಿಸರ್ಗ ಚಂಡಮಾರುತ

Public TV
2 Min Read
Cyclone 2

-ದಕ್ಷಿಣ ಕನ್ನಡದಲ್ಲಿ ಆರೆಂಜ್ ಅಲರ್ಟ್ ಮುಂದುವರಿಕೆ

ಬೆಂಗಳೂರು: ನಿಸರ್ಗ ಚಂಡಮಾರುತದ ಎಫೆಕ್ಟ್ ನಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯಾಗುತ್ತಿದೆ. ಅರಬ್ಬಿ ಸಮುದ್ರ ಪ್ರಕ್ಷುಬ್ಧಗೊಂಡು ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿವೆ. ಜಿಲ್ಲೆಯಲ್ಲಿ ಇಂದು ಸಹ ಆರೆಂಜ್ ಅಲರ್ಟ್ ಘೋಷಣೆ ಮಾಡಿದ್ದು, ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಮಂಗಳೂರಿಗೆ ಆಗಮಿಸಿದೆ.

Cyclone 4

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ನಿಸರ್ಗ ಚಂಡಮಾರುತದ ಎಫೆಕ್ಟ್ ರಾಜ್ಯದ ಕರಾವಳಿಗೂ ತಟ್ಟಿದೆ. ಸಮುದ್ರದಲ್ಲಿ ಗಂಟೆಗೆ 70ರಿಂದ 80 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುತ್ತಿದ್ದು, ರಕ್ಕಸ ಗಾತ್ರದ ಅಲೆಗಳು ದಡಕ್ಕೆ ಬಂದು ಅಪ್ಪಳಿಸುತ್ತಿದೆ. ಮಂಗಳೂರಿನ ಸೋಮೇಶ್ವರ ಉಚ್ಚಿಲ, ಉಳ್ಳಾಲ ಮೊಗವೀರ ಪಟ್ನ, ಕೈಕೋ, ಹಿಲರಿಯ ನಗರ ಪ್ರದೇಶಗಳಲ್ಲಿ ಕಡಲಿನ ಅಬ್ಬರ ಜಾಸ್ತಿಯಾಗಿದೆ.

Cyclone 3

ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿದ್ರು. ಜಿಲ್ಲಾಧಿಕಾರಿ, ಬಂದರು ಇಲಾಖೆ ಎ.ಡಿ.ಬಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ತಡೆಗೋಡೆ ಹೇಗೆ ನಿರ್ಮಿಸುವುದು ಮತ್ತು ತುರ್ತಾಗಿ ಯಾವ ಕಾರ್ಯ ಮಾಡಬೇಕುಂಬುದರ ಬಗ್ಗೆ ಗಮನ ಹರಿಸುತ್ತೇವೆ ಎಂದರು.

Cyclone 1

ಎನ್‍ಡಿಆರ್‍ಎಫ್ ತಂಡ: ಮುಂದಿನ 24 ಗಂಟೆ ಕರಾವಳಿಯಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಮಳೆಗಾಲದಲ್ಲಿ ಸಂಭವಿಸಬಹುದಾದ ದುರಂತಗಳನ್ನು ನಿರ್ವಹಿಸಲು ಎನ್.ಡಿ.ಆರ್.ಎಫ್ ತಂಡ ಮಂಗಳೂರಿಗೆ ಆಗಮಿಸಿದೆ. ಸುಮಾರು 25 ಸದಸ್ಯರ ಎನ್.ಡಿ.ಆರ್.ಎಫ್ ತಂಡವು ಪಿಲಿಕುಳ ಸ್ಕೌಟ್ಸ್ ಭವನದಲ್ಲಿ ವಾಸ್ತವ್ಯ ಹೂಡಿದೆ. ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಸನ್ನಿವೇಶ ಎದುರಿಸಲು ಜಿಲ್ಲಾಡಳಿತಕ್ಕೆ ಎನ್.ಡಿ.ಆರ್.ಎಫ್ ಆಗಮನ ನೆರವಾಗಲಿದೆ.

Cyclone 5

ಉಡುಪಿಯಲ್ಲೂ ನಿಸರ್ಗ ಚಂಡಮಾರುತ ಅಬ್ಬರ ಜೋರಾಗಿದೆ. ಗಂಟೆಗೆ 50-60 ಕಿಲೋ ಮೀಟರ್ ವೇಗದ ವಿಪರೀತ ಗಾಳಿ ಆರಂಭವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಿಸರ್ಗ ಚಂಡಮಾರುತ ಅಬ್ಬರ ಹೆಚ್ಚಾಗಿದ್ದು, ಕಾರವಾರದಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಕಾರವಾರ ಸೇರಿದಂತೆ ಹಲವು ಭಾಗಗಳಲ್ಲಿ ಮರಗಳು ಧರೆಗುರುಳಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಐದು ದಿನಗಳ ಕಾಲ ಮೀನುಗಾರಿಕೆಯನ್ನು ಬಂದ್ ಮಾಡು, ಜಿಲ್ಲಾಡಳಿತ ಕಟ್ಟೆಚ್ಚರ ವಹಿಸಿದೆ.

ಕಳೆದ ಬಾರಿಯ ಮಳೆಗಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಭಾಗದಲ್ಲಿ ಸಾಕಷ್ಟು ಪ್ರಾಕೃತಿಕ ಹಾನಿ ಸಂಭವಿಸಿತ್ತು. ಇದೀಗ ಸೈಕ್ಲೋನ್ ಮಳೆಗೆ ತಾಲೂಕಿನ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಜನ ಆತಂಕಗೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *