ಕಪ್ಪೆಯನ್ನೇ ಕಪ್ಪೆ ನುಂಗಿತ್ತಾ – ಕುತೂಹಲಕ್ಕೆ ಕಾರಣವಾಯ್ತು ಘಟನೆ

Public TV
2 Min Read
kwr kappe

– ಜಂಪಿಂಗ್ ಚಿಕನ್‍ಗೆ ಗೋವಾದಲ್ಲಿದೆ ಬಹು ಬೇಡಿಕೆ
– ಕಾರವಾರದಲ್ಲೊಂದು ಅಪರೂಪದ ಘಟನೆ

ಕಾರವಾರ: ಕಪ್ಪೆಗಳನ್ನು ಹಾವು ನುಂಗುವುದು ಸಾಮಾನ್ಯ. ಹಾಗೆಯೇ ಅಪರೂಪಕ್ಕೆ ಕಪ್ಪೆಗಳೇ ಹಾವನ್ನು ನುಂಗಿದ ಘಟನೆ ಕೂಡ ನಡೆದಿದೆ. ಆದರೆ ಕಪ್ಪೆಯೊಂದು ತನ್ನದೇ ಜಾತಿಯ ಮತ್ತೊಂದು ಕಪ್ಪೆಯನ್ನು ನುಂಗಿದ ಅಪರೂಪದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡ ಗ್ರಾಮದಲ್ಲಿ ನಡೆದಿದೆ.

ಈ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಕಾರವಾರದ ಅಜಯ್ ಎಂಬುವವರು ಈ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ. ನೀರಿನಲ್ಲಿ ಮತ್ತು ನೆಲದ ಮೇಲೆ ವಾಸಿಸುವ ಕಪ್ಪೆ ಮಾಂಸಾಹಾರಿ ವರ್ಗಕ್ಕೆ ಸೇರಿವೆ. ಬುಲ್ ಫ್ರಾಗ್ ಎಂದು ವೈಜ್ಞಾನಿಕ ಹೆಸರಿನ ಸ್ಥಳೀಯ ಭಾಷೆಯಲ್ಲಿ ಗೋಂಕರ ಕಪ್ಪೆಯೆನ್ನುವ ಈ ಕಪ್ಪೆ ಟ್ರೀ ಫ್ರಾಗ್ (ಮರಗಪ್ಪೆ)ಯನ್ನು ನುಂಗಿದೆ.

bul frog

ಗೋಂಕರು ಕಪ್ಪೆ ಸಂಶೋಧಕರು ಹೇಳುವಂತೆ ಸುಮಾರು ಏಳು ಕೆಜಿ ತೂಕದ ವರೆಗೆ ದೂಡ್ಡ ಗಾತ್ರದಲ್ಲಿ ಬೆಳೆಯುತ್ತವೆ. ಈ ಕಪ್ಪೆಗಳು ನಿತ್ಯ ಹರಿದ್ವರ್ಣ ಕಾಡುಗಳಲ್ಲಿ ಹೆಚ್ಚು ಕಾಣಸಿಗುತ್ತವೆ. ಇವು ತನ್ನ ಗಾತ್ರಕ್ಕಿಂತ ಚಿಕ್ಕದಿರುವ ಯಾವುದೇ ಪ್ರಾಣಿ, ಪಕ್ಷಿಗಳಿರಬಹುದು ಅವುಗಳನ್ನು ಭಕ್ಷಿಸುತ್ತವೆ. ಆಹಾರಕ್ಕಾಗಿ ತನ್ನದೇ ವಂಶದ ಕಪ್ಪೆಗಳನ್ನು ಸಹ ತನ್ನ ಗಾತ್ರಕ್ಕಿಂತ ಚಿಕ್ಕದಾಗಿದ್ದಲ್ಲಿ ಇವು ತಿನ್ನುತ್ತವೆ. ಇದಲ್ಲದೇ ಚಿಕ್ಕ ಹಾವುಗಳನ್ನು ಕೂಡ ತಿನ್ನುತ್ತವೆ ಎನ್ನುತ್ತಾರೆ ತಜ್ಞರು. ಇವು ಈ ರೀತಿ ತಿನ್ನುವುದು ಸರ್ವೇ ಸಾಮಾನ್ಯ, ಕಾಳಿಂಗ ಸರ್ಪಗಳು ಹೇಗೆ ಕೇರೆ ಹಾವನ್ನು ತಿನ್ನುತ್ತವೆಯೋ ಅದೇ ಮಾದರಿಯಲ್ಲಿ ಇವು ತಿನ್ನುತ್ತವೆ ಎನ್ನುವುದು ತಜ್ಞರ ಮಾತು.

bul frog 2

ಗೋವಾಕ್ಕೆ ಮಾರಾಟ
ಬುಲ್ ಪ್ರಾಗ್ ಕಪ್ಪೆಯು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಅಂಕೋಲ, ಜೋಯಿಡಾ ಭಾಗಗಳಲ್ಲಿ ಅತೀ ಹೆಚ್ಚು ಕಾಣಸಿಗುತ್ತವೆ. ಮಳೆಗಾಲ ಪ್ರಾರಂಭದಲ್ಲಿ ಇವು ಸಂತಾನೋತ್ಪತ್ತಿಗಾಗಿ ಹೊರಬರುತ್ತವೆ. ಈ ಕಪ್ಪೆಗಳು ಗಾತ್ರದಲ್ಲಿ ದೊಡ್ಡದಿದ್ದು ಗೋವಾ ರಾಜ್ಯದಲ್ಲಿ ಬರುವ ವಿದೇಶಿಗರಿಗೆ ಈ ಕಪ್ಪೆ ಅಚ್ಚುಮೆಚ್ಚು. ಗೋವಾದಲ್ಲಿ ಜಂಪಿಂಗ್ ಚಿಕನ್ ಎಂದು ಪ್ರಸಿದ್ಧಿ ಪಡೆದಿದ್ದು, ಕಾರವಾರದ ಮೂಲಕ ಈ ಕಪ್ಪೆಗಳು ಅನಧಿಕೃತವಾಗಿ ಗೋವಾಕ್ಕೆ ಸಾಗಿಸಲಾಗುತ್ತದೆ. ಕರ್ನಾಟಕದಲ್ಲಿ ಈ ಕಪ್ಪೆಗಳ ಬೇಟೆಗೆ ನಿಷೇಧವಿದೆ. ಆದರೂ ಗೋವಾ ರಾಜ್ಯದಲ್ಲಿ ಮಾಂಸಕ್ಕಾಗಿ ಇದರ ಬೇಡಿಕೆ ಹೆಚ್ಚಿದ್ದರಿಂದ ಇವುಗಳ ಬೇಟೆ ಹೆಚ್ಚು ನಡೆಯುತ್ತಿದ್ದು ಅಳವಿನ ಅಂಚಿನಲ್ಲಿದೆ.

kwr frog

ಉತ್ತರ ಕನ್ನಡ ಜಿಲ್ಲೆ ಅತ್ಯಂತ ಹೆಚ್ಚು ಅರಣ್ಯ ಪ್ರದೇಶ ಹೊಂದಿದ್ದು, ಇಲ್ಲಿ ಅಪರೂಪದ ಪ್ರಾಣಿಗಳು ಪಕ್ಷಿಗಳು, ಜಲಚರಗಳ ತವರಾಗಿದೆ. ಈ ಹಿಂದೆ ಗೋಕರ್ಣದಲ್ಲಿ ಕರಾವಳಿ ಸ್ಕೀಟರಿಂಗ್ ಎಂಬ ಅಪರೂಪದ ಸಂಗೀತ ಧ್ವನಿ ಹೊರಡಿಸುವ ಕಪ್ಪೆಯನ್ನು ಅರಣ್ಯಾಧಿಕಾರಿ ಸಿ.ಆರ್ ನಾಯ್ಕ ರವರು ಪತ್ತೆಮಾಡಿದ್ದರು. ಮೊಟ್ಟೆ ಬದಲು ನೇರವಾಗಿ ಮರಿ ಹಾಕುವ ಕಪ್ಪೆಗಳು, ಬಿದಿರಿನಲ್ಲಿ ಮಾತ್ರ ಬದುಕುವ ಹಾರುವ ಕಪ್ಪೆಗಳು, ದೇಹದ ಮೇಲ್ಭಾಗದಲ್ಲಿ ವಿಷವನ್ನು ಹೊಂದಿದ ಕಪ್ಪೆಗಳು ಜಿಲ್ಲೆಯಲ್ಲಿ ಪತ್ತೆಯಾಗಿವೆ.

Share This Article
Leave a Comment

Leave a Reply

Your email address will not be published. Required fields are marked *