– ಹಳದಿ ಫಂಗಸ್ ರೋಗ ಲಕ್ಷಣಗಳೇನು?
ಲಕ್ನೋ: ಕಪ್ಪು, ಬಿಳಿ ಬಳಿಕ ಭಯಾನಕ ಹಳದಿ ಫಂಗಸ್ ಘಾಜಿಯಾಬಾದ್ ಮೂಲದ ವ್ಯಕ್ತಿಯಲ್ಲಿ ಪತ್ತೆಯಾಗಿದೆ. ಈ ವ್ಯಕ್ತಿಯಲ್ಲಿ ಮೂರು ಮಾದರಿಯ ಫಂಗಸ್ ಪತ್ತೆಯಾಗಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಬಿತ್ತರಿಸಿವೆ.
ಕೊರೊನಾ ಎರಡನೇ ಅಲೆಯಲ್ಲಿ ಭಾರತ ಹೊಸ ಹೊಸ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಹೊಸ ಹಳದಿ ಫಂಗಸ್ ಈ ಮೊದಲಿನ ಕಪ್ಪು ಮತ್ತು ಬಿಳಿಗಿಂತ ಹೆಚ್ಚು ಅಪಾಯಕಾರಿ ಎಂದು ಹೇಳಲಾಗುತ್ತಿದೆ. ಇದುವರೆಗೂ ಗಾಜಿಯಾಬಾದ್ ನಲ್ಲಿ ಏಳು ಬಿಳಿ ಫಂಗಸ್ ಪ್ರಕರಣಗಳು ವರದಿಯಾಗಿವೆ.
ಹಳದಿ ಫಂಗಸ್ ಕಾಣಿಸಿಕೊಂಡಿರುವ ವ್ಯಕ್ತಿ ಘಾಜಿಯಾಬಾದ್ ನ ಸಂಜಯ್ ನಗರದ ನಿವಾಸಿಯಾಗಿದ್ದು, ಖ್ಯಾತ ಇಂಟ್ ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಾಜಿಯಾಬಾದ್ ಒಂದು ಖಾಸಗಿ ಆಸ್ಪತ್ರೆಯಲ್ಲಿ ಕಪ್ಪು ಮತ್ತುಬಿಳಿ ಶಿಲೀಂದ್ರದ 26 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಆದ್ರೆ ಮೂರು ಶಿಲೀಂಧ್ರದ ಸೋಂಕಿಗೆ ತುತ್ತಾಗಿರುವ ರೋಗಿ ದಾಖಲಾಗಿರುವ ಬಗ್ಗೆ ಖಾಸಗಿ ಆಸ್ಪತ್ರೆ ಅಧಿಕೃತ ಹೇಳಿಕೆ ನೀಡಿಲ್ಲ. ಸ್ಥಳೀಯ ಆರೋಗ್ಯ ಇಲಾಖೆ ಸಹ ಈ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಇದನ್ನೂ ಓದಿ: ಬ್ಲ್ಯಾಕ್ ಫಂಗಸ್ ಆಯ್ತು ಈಗ ವೈಟ್ ಫಂಗಸ್ ಕಾಟ
ಬ್ಲ್ಯಾಕ್ ಮತ್ತು ವೈಟ್ ಫಂಗಸ್ ಕಾಣಿಸಿಕೊಂಡ ರೋಗಿಗೆ ನೀಡುವ ಚಿಕಿತ್ಸೆ ದ್ವಿಗುಣವಾಗುತ್ತದೆ. ಈ ರೋಗ ಉಲ್ಬಣಗೊಂಡಾಗ ವೈಟ್ ನಂತರ ರೋಗಿಯಲ್ಲಿ ಹಳದಿ ಫಂಗಸ್ ಕಾಣಿಸಿಕೊಳ್ಳುತ್ತದೆ. ತೂಕ ಇಳಿಯುವಿಕೆ, ಹಸಿವು ಆಗದಿರುವುದು, ನಿಶ್ಯಕ್ತಿ, ಅಪೌಷ್ಟಿಕತೆ ಮತ್ತು ಅಂಗಾಂಗ ವೈಫಲ್ಯ ಈ ಹಳದಿ ಫಂಗಸ್ ಲಕ್ಷಣಗಳು. ಹಳದಿ ಶಿಲೀಂಧ್ರವು ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ರೋಗಿಯನ್ನ ಆಂತರಿಕವಾಗಿ ಕ್ಷೀಣಿಸುತ್ತದೆ. ಈ ರೀತಿಯ ರೋಗ ಲಕ್ಷಣಗಳು ಕಂಡು ಬಂದ್ರೆ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕು. ಇದಕ್ಕೆ ಅಂಫೊಟೆರಾಸಿನ್ ಇಂಜೆಕ್ಷನ್ ಏಕೈಕ ಮದ್ದು. ಜನರು ತಾವು ವಾಸವಾಗಿರುವ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ.