ಬೆಂಗಳೂರು: ಅಭಿನಯ ಚಕ್ರವರ್ತಿ ಎಂದೇ ಖ್ಯಾತರಾಗಿರುವ ಕಿಚ್ಚ ಸುದೀಪ್ ಅವರ ಡ್ರೆಸ್ಸಿಂಗ್ ಸ್ಟೈಲ್ ಗೆ ಎಲ್ಲರೂ ಫಿದಾ ಆಗಿರುತ್ತಾರೆ. ಆದರೆ ಸುದೀಪ್ ಅವರು ಹೆಚ್ಚಾಗಿ ಕಪ್ಪು ಬಣ್ಣದ ಡ್ರೆಸ್ ಅನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇದೀಗ ಈ ಕಲರ್ ಆಯ್ಕೆ ಮಾಡಿಕೊಳ್ಳಲು ಕಾರಣವೇನು ಎಂಬುದನ್ನು ಸ್ವತಃ ನಟನೇ ಬಹಿರಂಗಪಡಿಸಿದ್ದಾರೆ.
ಹೌದು. ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡಿ 25 ವರ್ಷಗಳು ಪೂರೈಸಿದ ಕಾರಣ ಕಿಚ್ಚನ ಬೆಳ್ಳಿಹಬ್ಬವನ್ನು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಕೋಟಿಗೊಬ್ಬ-3 ಸಿನಿಮಾತಂಡದಿಂದ ಸುದೀಪ್ ಬೆಳ್ಳಿಹಬ್ಬದ ಸಂಭ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಕಿಚ್ಚ ತಾನ್ಯಾಕೆ ಕಪ್ಪು ಬಣ್ಣವನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂಬುದರ ರಹಸ್ಯ ಬಿಚ್ಚಿಟ್ಟಿದ್ದಾರೆ.
ನಾನು ಕಪ್ಪು ಬಟ್ಟೆ ಧರಿಸಲು ಕಾರಣ ರವಿ ಸರ್. ಚಿಕ್ಕವನಾಗಿದ್ದಾಗಿಂದಲೇ ನಾನು ರವಿಚಂದ್ರನ್ ಅವರ ಸಿನಿಮಾಗಳನ್ನು ನೋಡಿ ಬೆಳೆದವನು. ಅವರ ಸಿನಿಮಾಗಳನ್ನು ನೋಡಿ ನಾನು ಕೂಡ ಕಪ್ಪು ಬಟ್ಟೆ ಹಾಕುತ್ತಿದ್ದೆ ಎಂದರು.
ಒಮ್ಮೆ ರವಿ ಸರ್ ಅವರನ್ನೆ ನಾನು ಕೇಳಿದ್ದೆ, ಯಾಕೆ ನೀವು ಯಾವಾಗಲು ಕಪ್ಪು ಬಟ್ಟೆ ಧರಿಸುತ್ತೀರಿ ಅಂತ. ಆಗ ಅವರು ಎರಡು ಕಾರಣ ಇದೆ ಎಂದು ಹೇಳಿದ್ದರು. ಒಂದು ನಾವು ಬೆಳ್ಳಗೆ ಕಾಣುತ್ತೇವೆ, ಎರಡನೇಯದು ತೆಳ್ಳಗೆ ಕಾಣುತ್ತೇವೆ ಎಂದಿದ್ದರು ಎಂಬ ರವಿಚಂದ್ರನ್ ಮಾತುಗಳನ್ನು ಕಿಚ್ಚ ಮೆಲುಕು ಹಾಕಿಕೊಂಡರು. ಅಲ್ಲದೆ ನಿಮ್ಮಂತಹ ಹಿರಿಯರು ನಮ್ಮನ್ನು ತಿದ್ದಲು ಇರಬೇಕು ಎನ್ನುತ್ತಾ ಧನ್ಯವಾದ ಅರ್ಪಿಸಿದರು.