ಗದಗ: ಒಂದೆಡೆ ನೆರೆಯಿಂದ ಬೆಳೆ ಹಾಳಾದರೆ, ಇನ್ನೊಂದೆಡೆ ಪ್ರಾಣಿಗಳ ದಾಳಿಯಿಂದಾ ರೈತರ ಬೆಳೆ ನಾಶವಾಗುತ್ತಿದೆ. ಇದರಿಂದಾಗಿ ರೈತರು ಕಂಗಾಲಾಗಿದ್ದು, ದಾರಿ ತೋಚದಂತಾಗದೆ ಬೆಳೆ ಹಾಳಾದರೂ ಕೈಕಟ್ಟಿ ಕೂರುವ ಪರಿಸ್ಥಿತಿ ಎದುರಾಗಿದೆ.
Advertisement
ಜಿಲ್ಲೆಯ ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡ ಸೆರಗಿನ ಡೋಣಿ ಬಳಿಯ ರೈತರಿಗೆ ಕಾಡು ಪ್ರಾಣಿಗಳ ಕಾಟ ಎದುರಾಗಿದ್ದು, ಸಾಲ ಮಾಡಿ ಬೆಳೆದ ಅನೇಕ ಬೆಳೆಗಳು ಪ್ರಾಣಿಗಳ ಪಾಲಾಗುತ್ತಿವೆ. ಉತ್ತರ ಕರ್ನಾಟಕದ ಸಹ್ಯಾದ್ರಿ ಎಂದೇ ಕರೆಸಿಕೊಳ್ಳುವ ಕಪ್ಪತ್ತಗುಡ್ಡದಲ್ಲಿ ಕಾಡುಪ್ರಾಣಿಗಳು ತುಂಬಾ ಇವೆ. ಚಿರತೆ, ಕಾಡುಹಂದಿ, ಕಾಡುಬೆಕ್ಕು, ತೋಳ, ನರಿ, ಕತ್ತೆ ಕಿರುಬ, ನವಿಲು ಸೇರಿದಂತೆ ಅನೇಕ ಪ್ರಾಣಿ, ಪಕ್ಷಿಗಳು ಈ ಕಾಡಲ್ಲಿ ನೆಲೆಯೂರಿವೆ. ಈ ಕಾಡು ಪ್ರಾಣಿಗಳು ರೈತರ ಬೆಳೆಗಳ ಮೇಲೆ ದಾಳಿ ಮಾಡುತ್ತಿದ್ದು, ರೈತರ ಬದುಕನ್ನು ಮೂರಾಬಟ್ಟೆ ಮಾಡುತ್ತಿವೆ.
Advertisement
ಕಪ್ಪತ್ತಗುಡ್ಡ ಸೇರಗಿನ ಡೋಣಿ, ತಾಂಡಾ, ಕಡಕೊಳ, ಜಲ್ಲಿಗೇರಿ, ಹೊಸಳ್ಳಿ, ಹಿರೇವಡ್ಡಟ್ಟಿ, ಹಾರೊಗೇರಿ ಹೀಗೆ ಅನೇಕ ಗ್ರಾಮಗಳ ಜಮೀನುಗಳಿಗೆ ಕಾಡುಪ್ರಾಣಿಗಳ ಕಾಟ ಹೆಚ್ಚಾಗಿದೆ. ಫಸಲು ನೀಡುವ ಸಮಯದಲ್ಲಿ ಪ್ರಾಣಿಗಳು ದಾಳಿ ಮಾಡಿ, ಹಾಳುಗೆಡುವುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಈ ಕಾಡು ಪ್ರಾಣಿಗಳಿಂದ ಮುಕ್ತಿ ನೀಡಿ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
Advertisement
Advertisement
ಕಪ್ಪತ್ತಗುಡ್ಡದ ಸೆರಗಿನ ಸಾವಿರಾರು ಹೆಕ್ಟೇರ್ ಪ್ರದೇಶದ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ, ಸೂರ್ಯಕಾಂತಿ, ಶೇಂಗಾ, ಹತ್ತಿ ಹಾಗೂ ಜೋಳ ಸೇರಿದಂತೆ ಅನೇಕ ಬೆಳೆಗಳನ್ನು ಪ್ರಾಣಿಗಳು ತಿಂದು ಹಾಕುತ್ತಿವೆ. ಫಸಲು ಬಾರದೆ ರೈತರು ಮತ್ತಷ್ಟು ಸಾಲದ ಸುಳಿಗೆ ಸಿಲುಕಿದ್ದಾರೆ. ಡೋಣಿ ಗ್ರಾಮದಲ್ಲಿ ಮೆಕ್ಕೆಜೋಳ ಫಸಲು ಬರುವ ಸಮಯದಲ್ಲಿ ಕಾಡು ಹಂದಿಗಳು ಜಮೀನಿಗೆ ನುಗ್ಗಿ ಬೆಳೆ ಹಾನಿ ಜೊತೆಗೆ ತೆನೆಗಳನ್ನೂ ತಿಂದು ಹಾಳು ಮಾಡಿವೆ.
ಈ ಮೊದಲು ಕಾಡು ಪ್ರಾಣಿಗಳ ಹಾವಳಿ ನಿಯಂತ್ರಿಸಲು ಪಟಾಕಿ ಸಿಡಿಸಿ, ಬೆಂಕಿಹಾಕಿ, ಬಲೆಹಾಕಿ ಓಡಿಸಲಾಗುತ್ತಿತ್ತು. ಆದರೆ ಈಗ ಅರಣ್ಯ ಇಲಾಖೆ ಅಂತಹ ಚಟುವಟಿಕೆಗೆ ಬ್ರೇಕ್ ಹಾಕಿದೆ. ಹೀಗಾಗಿ ರಾತ್ರಿ ಹಗಲು ಎನ್ನುದೆ ಕಾಡು ಪ್ರಾಣಿಗಳನ್ನು ಕಾಯುವ ಸ್ಥಿತಿ ನಿರ್ಮಾಣವಾಗಿದೆ. ಆದರೂ ರೈತರ ಕಣ್ಣು ತಪ್ಪಿಸಿ ಬೆಳೆಯನ್ನು ನಾಶ ಮಾಡುತ್ತಿವೆ. ಹೀಗಾಗಿ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಈ ಕುರಿತು ಅರಣ್ಯ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಬೆಳೆ ಹಾನಿಯಾದ ಪ್ರದೇಶವನ್ನು ಸರ್ವೇ ಮಾಡಿ ಪರಿಹಾರ ನೀಡುತ್ತೇವೆ ಎನ್ನುತ್ತಿದ್ದಾರೆ. ಆದರೆ ವರ್ಷವಿಡಿ ಕಷ್ಟಪಟ್ಟು ದುಡಿದು ಬೆಳೆದ ಬೆಳೆಗೆ ಅರಣ್ಯ ಇಲಾಖೆ ನೀಡುವ ಅಲ್ಪ ಪ್ರಮಾಣದ ಪರಿಹಾರ ಯಾವುದಕ್ಕೂ ಸಾಕಾಗುವುದಿಲ್ಲ. ಹೀಗಾಗಿ ಅರಣ್ಯ ಇಲಾಖೆ ಕಾಡು ಪ್ರಾಣಿಗಳ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಂಡು ರೈತರ ಕಷ್ಟವನ್ನು ನೀಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.