ಲಂಡನ್: ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಮುಂದಿನ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ಮಾಜಿ ವೇಗದ ಬೌಲರ್ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿಯುವ ತವಕದಲ್ಲಿದ್ದಾರೆ.
ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತದ ಪರವಾಗಿ ಅತೀ ವೇಗವಾಗಿ 100 ವಿಕೆಟ್ ಪಡೆದ ವೇಗದ ಬೌಲರ್ ಎಂಬ ದಾಖಲೆ ಮಾಡಿದ್ದಾರೆ. ಈ ದಾಖಲೆಯನ್ನು ಮುರಿಯುವ ಸುವರ್ಣ ಅವಕಾಶ ಬುಮ್ರಾ ಪಾಲಿಗೆ ಒಲಿದುಬಂದಿದೆ. ಇದನ್ನೂ ಓದಿ: ಕ್ರಿಕೆಟ್ ವಿಶ್ವಕಪ್‍ಗಾಗಿ ಐಸಿಸಿ ಮಹತ್ವದ ನಿರ್ಧಾರ – ಬದಲಾವಣೆಯ ಪರ್ವ ಆರಂಭ
ಕಪಿಲ್ ದೇವ್ 100 ವಿಕೆಟ್ ಪಡೆಯಲು 25 ಪಂದ್ಯಗಳನ್ನು ಆಡಿದ್ದರು. ಆದರೆ ಇದೀಗ ಬುಮ್ರಾ ಈಗಾಗಲೇ 19 ಟೆಸ್ಟ್ ಪಂದ್ಯಗಳಿಂದ 83 ವಿಕೆಟ್ ಪಡೆದಿದ್ದಾರೆ. ಇನ್ನೂ ಕೇವಲ 17 ವಿಕೆಟ್ ಪಡೆದರೆ ಕಪಿಲ್ ದೇವ್ ಅವರ ದಾಖಲೆ ಮುರಿಯಬಹುದಾಗಿದೆ. ಕಪಿಲ್ ದೇವ್ ಬಳಿಕ ವೇಗವಾಗಿ 100 ವಿಕೆಟ್ ಕಿತ್ತ ಸಾಧನೆ ಇರ್ಫಾನ್ ಪಠಾಣ್ ಪಾಲಾಗಿದೆ. ಪಠಾಣ್ 100 ವಿಕೆಟ್ ಕಬಳಿಸಲು 28 ಪಂದ್ಯಗಳನ್ನು ಆಡಿದ್ದರು. ನಂತರ 29 ಪಂದ್ಯಗಳಿಂದ ಮೊಹಮ್ಮದ್ ಶಮಿ 100 ವಿಕೆಟ್ ಸಾಧನೆ ಮಾಡಿದ್ದಾರೆ.
ಬುಮ್ರಾ, ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವೆ ಇಂಗ್ಲೆಂಡ್‍ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಮತ್ತು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ಪಿಚ್‍ಗಳು ವೇಗಿಗಳಿಗೆ ನೆರವು ನೀಡುವುದರಿಂದಾಗಿ ಮುಂದಿನ ಟೆಸ್ಟ್ ಪಂದ್ಯಗಳಲ್ಲಿ ಬುಮ್ರಾ ವಿಕೆಟ್ ಟೇಕಿಂಗ್ ಬೌಲರ್ ಆಗುತ್ತಾರೆ ಎಂಬುದು ಎಲ್ಲರ ನಿರೀಕ್ಷೆಯಾಗಿದೆ. ಹಾಗಾಗಿ ಬುಮ್ರಾ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿಯಬಹುದೆಂದು ನಿರೀಕ್ಷೆ ಇಡಲಾಗಿದೆ. ಇದನ್ನೂ ಓದಿ: ಸೆಪ್ಟೆಂಬರ್‌ನಿಂದ ನಡೆಯಲಿವೆ ಮುಂದೂಡಲ್ಪಟ್ಟ ಐಪಿಎಲ್ ಪಂದ್ಯಗಳು- ಬಿಸಿಸಿಐ ಘೋಷಣೆ
ಭಾರತ ತಂಡದ ಪರವಾಗಿ ಟೆಸ್ಟ್ ಕ್ರಿಕೆಟ್‍ನಲ್ಲಿ ವೇಗವಾಗಿ 100 ವಿಕೆಟ್ ಕಿತ್ತ ದಾಖಲೆ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಹೆಸರಿನಲ್ಲಿದೆ. ಅಶ್ವಿನ್ ಕೇವಲ 19 ಪಂದ್ಯಗಳಿಂದ 100 ವಿಕೆಟ್ ಪಡೆದಿದ್ದಾರೆ. ನಂತರ ಎರಪಳ್ಳಿ ಪ್ರಸನ್ನ 20 ಪಂದ್ಯಗಳಿಂದ, ಅನಿಲ್ ಕುಂಬ್ಳೆ 21 ಪಂದ್ಯಗಳಿಂದ 100 ವಿಕೆಟ್ ಸಾಧನೆ ಮಾಡಿದ್ದಾರೆ.