– ಯುವಕರ ನಡೆಗೆ ಪ್ರಶಂಸೆ
ಬೆಂಗಳೂರು: ರಾಜ್ಯದ ಗಡಿಭಾಗವಾದ ಆನೇಕಲ್ ತಾಲೂಕಿನ ಸೊಲೂರು ಗ್ರಾಮದ ಕನ್ನಡ ಶಾಲೆಗೆ ಹೊಸ ರೂಪ ಕೊಟ್ಟು ನವೀಕರಿಸುವ ಮೂಲಕ ಶಕ್ತಿ ಸೇವಾ ಟ್ರಸ್ಟ್ ಹಾಗೂ ವಿವೇಕಾನಂದ ಯುವ ಬ್ರಿಗೇಡ್ ತಂಡದ ಯುವಕರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಶಾಲೆಯ ನೂತನ ಕಟ್ಟಡವನ್ನ ಉದ್ಘಾಟನೆ ಮಾಡಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಸೊಲೂರಿನ ವಿನೋಬ ಭಾವೆ ಸರ್ಕಾರಿ ಶಾಲೆ ಭೇಟಿ ಕೊಟ್ಟು ನೂತನ ಕೊಠಡಿಗಳ ಉದ್ಘಾಟನೆ ನೆರವೇರಿಸಿದರು. ಸುಮಾರು 35 ಲಕ್ಷ ವೆಚ್ಚ ಮಾಡಿ ಶಾಲೆಯ ಮೊದಲ ಮಹಡಿಯಲ್ಲಿ ಮೂರು ಅತ್ಯಾಧುನಿಕ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಜೊತೆಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಅತ್ಯಾಧುನಿಕ ಶೌಚಾಲಯವನ್ನು ನಿರ್ಮಿಸಲಾಗಿದೆ. ಹೀಗಾಗಿ ಖುದ್ದು ಸಚಿವರೇ ಶಾಲೆಯನ್ನು ವೀಕ್ಷಣೆ ಮಾಡಿ ಯುವ ಬ್ರಿಗೇಡ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಗಡಿಭಾಗದ ಕನ್ನಡ ಶಾಲೆಗಳು ನಿಜಕ್ಕೂ ಶೋಚನೀಯ ಸ್ಥಿತಿಯಲ್ಲಿದ್ದು ಅವುಗಳನ್ನು ಅಭಿವೃದ್ಧಿ ಮಾಡುವ ಮೂಲಕ ಕನ್ನಡ ಶಾಲೆಗಳನ್ನು ಉನ್ನತೀಕರಿಸುವ ಕೆಲಸ ಇಂದು ಸೊಲೂರಿನಲ್ಲಿ ನಡೆದಿದೆ. ಚಕ್ರವರ್ತಿ ಸೂಲಿಬೆಲೆಯವರ ಯುವ ಬ್ರಿಗೇಡ್ ಸದಸ್ಯರು ರಾಜ್ಯದ ಹಲವು ಕಡೆಗಳಲ್ಲಿ ಕೈಗಾರಿಕೆಗಳ ಜೊತೆಗೂಡಿ ಜನಪರ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಸಮಾಜದ ಮೇಲಿನ ಕಳಕಳಿ ಇದೇ ರೀತಿ ಮುಂದುವರಿಯಲಿ ಎಂದರು.
ಭಗವಾನ್ ಅವರ ವಿವಾದಾತ್ಮಕ ಪುಸ್ತಕದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುರೇಶ್ ಕುಮಾರ್, ಚರ್ಚೆ ಬೇಡ ಭಗವಾನ್ ಪುಸ್ತಕ ಖರೀದಿ ಮಾಡಿಲ್ಲ. ಈ ಬಗ್ಗೆ ಫೇಸ್‍ಬುಕ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದೇನೆ ಎಂದು ತಿಳಿಸಿದರು.
ಯುವ ಬ್ರಿಗೇಡ್ ರಾಜ್ಯಾಧ್ಯಕ್ಷ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸೋಲೂರಿನ ಸರ್ಕಾರಿ ಶಾಲಾ ಕಟ್ಟ ತೀರಾ ಕೆಟ್ಟ ಸ್ಥಿತಿಯಲ್ಲಿತ್ತು. ನಮ್ಮ ಸದಸ್ಯರೊಬ್ಬರು ಇದನ್ನು ನಮ್ಮ ಗಮನಕ್ಕೆ ತಂದರು. ನಾವು ಕಂಪನಿಯ ಅಡಿಯಲ್ಲಿ 22 ಲಕ್ಷ ಹಾಗೂ ನಮ್ಮ ಯುವ ಬ್ರಿಗೇಡ್ ಸದಸ್ಯರು ಸಾಮಾಜಿಕ ಜಾಲತಾಣದ ಮೂಲಕ ಹಣವನ್ನು ದಾನಿಗಳಿಂದ ಸಂಗ್ರಹಿಸಿ ಒಟ್ಟು 35 ಲಕ್ಷ ವೆಚ್ಚ ಮಾಡಿ ಸರ್ಕಾರಿ ಶಾಲೆಗೆ ಮೂರು ಹೊಸ ಕಟ್ಟಡ ನಿರ್ಮಿಸಿ ಹೊಸ ರೂಪವನ್ನು ನೀಡಿದ್ದೇವೆ. ಶಿಕ್ಷಣ ಸಚಿವರು ನೂತನ ಕಟ್ಟಡವನ್ನು ಉದ್ಘಾಟನೆ ಮಾಡಿರುವುದು ನಿಜಕ್ಕೂ ಇನ್ನು ಹೆಚ್ಚು ಸಂತಸ ನೀಡಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.