ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ಸಂಗೀತ ನಿರ್ದೇಶಕ ರಾಜನ್ ಸಾವನ್ನಪ್ಪಿದ್ದಾರೆ.
ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ರಾಜನ್ ಕಳೆದ ರಾತ್ರಿ 10.30ಕ್ಕೆ ಹೃದಯಾಘಾತದಿಂದ ನಿಧನರಾದ್ರು. ಮೂಲತಃ ಮೈಸೂರಿನವರಾದ ರಾಜನ್ ಸಹೋದರ ನಾಗೇಂದ್ರ ಜೊತೆಗೂಡಿ ಕನ್ನಡದ ಸುಮಾರು 375ಕ್ಕೂ ಹೆಚ್ಚು ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ.
Advertisement
Advertisement
1952ರಲ್ಲಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟ ಈ ಜೋಡಿ, ಸುಮಾರು 5 ದಶಕಗಳ ಕಾಲ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿತ್ತು. 1952ರಿಂದ 1999ರವರೆಗೆ 375ಕ್ಕೂ ಅಧಿಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಇದರಲ್ಲಿ ಕನ್ನಡದ 200ಕ್ಕೂ ಅಧಿಕ ಸಿನಿಮಾಗಳಿವೆ. ಕನ್ನಡದ ಜೊತೆ ತೆಲುಗಿನಲ್ಲಿಯೂ ಈ ಜೋಡಿ ದೊಡ್ಡ ಯಶಸ್ಸು ಕಂಡಿತ್ತು. ತಮಿಳು, ಹಿಂದಿ, ಮಲಯಾಳಂ, ಶ್ರೀಲಂಕಾದ ಸಿಂಹಳ ಭಾಷೆಯ ಸಿನಿಮಾಗಳಿಗೂ ಸಂಗೀತ ಸಂಯೋಜಿಸಿದ್ದಾರೆ.
Advertisement
Advertisement
‘ಮಂತ್ರಾಲಯ ಮಹಾತ್ಮೆ’, ‘ಗಂಧದ ಗುಡಿ’, ‘ನಾ ನಿನ್ನ ಬಿಡಲಾರೆ’, ‘ಎರಡು ಕನಸು’, ‘ಕಳ್ಳ ಕುಳ್ಳ’, ‘ಬಯಲು ದಾರಿ’, ‘ನಾ ನಿನ್ನ ಮರೆಯಲಾರೆ’, ‘ಹೊಂಬಿಸಿಲು’, ‘ಆಟೋ ರಾಜ’, ‘ಗಾಳಿಮಾತು’, ‘ಚಲಿಸುವ ಮೋಡಗಳು’, ‘ಬೆಟ್ಟದ ಹೂವು’, ‘ಸುಪ್ರಭಾತ’, ‘ಮತ್ತೆ ಹಾಡಿತು ಕೋಗಿಲೆ’, ‘ಕರುಳಿನ ಕುಡಿ’, ‘ಪರಸಂಗದ ಗೆಂಡೆತಿಮ್ಮ’, ‘ಶ್ರೀನಿವಾಸ ಕಲ್ಯಾಣ’ ಇವುಗಳು ರಾಜನ್ ಸಂಗೀತ ನೀಡಿದ ಜನಪ್ರಿಯ ಸಿನಿಮಾಗಳಾಗಿವೆ. ಅದರಲ್ಲಿ ಡಾ. ರಾಜ್‍ಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳೇ ಜಾಸ್ತಿ ಇವೆ.
ಸದ್ಯ ರಾಜನ್ ನಿಧನಕ್ಕೆ ಚಿತ್ರ ರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇನ್ನು ಇಂದು ಹೆಬ್ಬಾಳ ಸ್ಮಶಾನದಲ್ಲಿ ಅವರ ಅಂತ್ಯಕ್ರಿಯೆ ನೆರವೇರಲಿದೆ.