ಬೆಂಗಳೂರು: ಕಾಂಗ್ರೆಸ್ಸಿನವರು ಅಷ್ಟು ಪ್ರಾಮಾಣಿಕರು ಆಗಿದ್ದರೆ ಹಣ ಹಂಚೋ ಕೆಲಸ ಯಾಕೆ ಮಾಡಬೇಕಿತ್ತು. ಕನಕಪುರದಿಂದ ಬಂದವರು ನಿನ್ನೆ ಕ್ಷೇತ್ರದಲ್ಲಿ ಹಣ ಹಂಚಿದ್ದಾರೆ. ಏಳು ಕಡೆ ಹಣ ಹಂಚಿ ಸಿಕ್ಕಿಬಿದ್ದಿದ್ದಾರೆ ಎಂದು ಆರ್‍ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಿಡಿಕಾರಿದ್ದಾರೆ.
ಆರ್ ಆರ್ ನಗರದಲ್ಲಿ ಹಣ ಹಂಚುತ್ತಿರುವ ಆರೋಪ ವಿಚಾರ ಸಂಬಂಧ ಪ್ರತಿಕ್ರಿಯಿಸಿ, ನಿನ್ನೆ ಹಣ ಹಂಚುತ್ತಿದ್ದವರ ವಿರುದ್ಧ ಏಳು ಎಫ್‍ಐಆರ್ ಗಳಾಗಿದೆ. ಕೆಲವರು ವಾಹನಗಳನ್ನು ಬಿಟ್ಟು ಓಡಿ ಹೋಗಿದ್ದಾರೆ. ಎಲ್ಲವೂ ತನಿಖೆ ಆಗ್ತಿದೆ. ಹಣ ಹಂಚೋದ್ರಿಂದ ಏನೂ ಸಾಧನೆ ಆಗಲ್ಲ. ಇಲ್ಲಿ ನಿಮ್ಮ ಹಣಕ್ಕಾಗಿ ಯಾರೂ ಕಾಯುತ್ತಿಲ್ಲ. ಕ್ಷೇತ್ರದಲ್ಲಿ ಇರೋರು ಶ್ರಮಿಕರು. ಅವರನ್ನು ಹಣದಿಂದ ಕೊಂಡುಕೊಳ್ಳಲು ಆಗಲ್ಲ. ನಾವು ಎಲ್ಲ ನೋಡ್ತಿದ್ದೀವಿ. ಹಣದಿಂದ ಜನರ ಮನಸಲ್ಲಿ ಸ್ಥಾನ ಹಿಡಿಯಕ್ಕಾಗಲ್ಲ. ಇಂದು ಸಂಜೆ ಮೇಲೆ ಹೊರಗಡೆಯವರು ಯಾರೂ ಇರಲ್ಲ. ಹೀಗಾಗಿ ಜನ ನೆಮ್ಮದಿಯಾಗಿ ಮತ ಚಲಾಯಿಸಲಿ. ಒಂದು ಮತಕ್ಕೆ 2 ಸಾವಿರ, 3 ಸಾವಿರ, 5 ಸಾವಿರದವರೆಗೂ ಅವರು ಆಮಿಷ ಒಡ್ಡುತ್ತಿದ್ದಾರೆ. ಅವರಿಗೆ ದುಡ್ಡಿಗೇನೂ ಕಮ್ಮಿ ಇಲ್ಲ, ಕೊಡ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ನಾನು ಮೊದಲಿಂದಲೂ ಹೇಳ್ತಿದ್ದೆ, ಸ್ವಲ್ಪ ಮೈಮರೆತರೂ ಈ ಕ್ಷೇತ್ರ ಕೆಜಿ, ಡಿಜೆ ಹಳ್ಳಿ ಆಗುತ್ತೆ ಅಂದಿದ್ದೆ. ಕೊಲೆಗಳೂ ನಡೆಯುತ್ತವೆ ಅಂದಿದ್ದೆ. ನಿನ್ನೆ ರಾತ್ರಿ ಅದಾಗಬೇಕಿತ್ತು. ಪೊಲೀಸರ ಮುನ್ನೆಚ್ಚರಿಕೆಯಿಂದ ಅದು ತಪ್ಪಿದೆ. ನಮ್ಮ ಪಕ್ಷದ ಸಿದ್ದೇಗೌಡರು, ಅವರ ಮಗನ ಮೇಲೆ ಹಲ್ಲೆ ಮಾಡಿದ್ದಾರೆ. ಇಂಥ ದೌರ್ಜನ್ಯ ಯಾಕೆ ಮಾಡ್ತಿದ್ದೀರಿ?, ನಿಮ್ಮ ಪರ ಕನಕಪುರದಿಂದ ಜನ ಬರ್ತಾರೆ ಅಂತ ನಮಗೂ ಗೊತ್ತು. ಆದರೆ ಕನಕಪುರದಿಂದ ಜನರನ್ನ ಕರೆಸಿ ಬೆಂಗಳೂರು ಹಾಳು ಮಾಡುವ ಅಗತ್ಯ ಇತ್ತಾ?, ಬೆಂಗಳೂರನ್ನು ಶಾಂತಿಯಿಂದ ಇರೋಕ್ಕೆ ಬಿಡಿ. ನಾನು ಕ್ಷೇತ್ರಕ್ಕೆ ಮಿಲಿಟರಿ ಬರಲಿ ಅಂತ ಕೇಳಿದ್ದು ಈ ಕಾರಣಕ್ಕೆನೇ ಕುಮಾರಸ್ವಾಮಿ ಅವರೂ ನಿನ್ನೆ ಹಣ ಹಂಚುತ್ತಿದ್ದ ಬಗ್ಗೆ ಹೇಳಿದ್ದಾರೆ ಎಂದರು.
ಇದೇ ವೇಳೆ ಬಿಜೆಪಿಗೆ ‘ಮುನಿರತ್ನ ಮುಳ್ಳು’ ಎಂಬ ಡಿಕೆಶಿ ಆರೋಪ ವಿಚಾರದ ಬಗ್ಗೆ ಮಾತನಾಡುತ್ತಾ ಡಿಕೆಶಿಗೆ ತಿರುಗೇಟು ನೀಡಿದ ಅವರು, ಯಾರು ಒಳ್ಳೆಯವ್ರು ಯಾರು ಭ್ರಷ್ಟರು ಅಂತ ಇಡೀ ಪ್ರಪಂಚಕ್ಕೆ ಗೊತ್ತು. ಮುನಿರತ್ನ 18 ನೇ ವಯಸ್ಸಿಂದಲೇ ಸಣ್ಣ ಗುತ್ತಿಗೆದಾರನಾಗಿ ಕೆಲಸ ಶುರು ಮಾಡಿದ್ದ. 18 ನೇ ವಯಸ್ಸಿಂದಲೇ ಆದಾಯ ತೆರಿಗೆ ಕಟ್ಟಿದ. ಮುನಿರತ್ನ ಭ್ರಷ್ಟ ಅನ್ನೋದಿಕ್ಕೆ ಯಾವುದೂ ಇಲ್ಲ. ಶಾಸಕನಾಗಿ ಎರಡನೇ ಸಲ ಗೆದ್ದಿದ್ದೇನೆ. ಭ್ರಷ್ಟ ಆಗಿದ್ರೆ ಕಾಂಗ್ರೆಸ್ಸಿನವರು ಯಾಕೆ ಸೇರಿಸಿಕೊಂಡಿದ್ರು. ಆವತ್ತೇ ಪಕ್ಷದಿಂದ ಕಳಿಸಬೇಕಿತ್ತು ಎಂದು ವಾಗ್ದಾಳಿ ನಡೆಸಿದರು.
2023ಕ್ಕೆ ಕಾಂಗ್ರೆಸ್ ಪಕ್ಷವನ್ನು ಡಿಕೆಶಿ ಉಳಿಸಲ್ಲ. ಇದರಲ್ಲಿ ಅನುಮಾನ ಇಲ್ಲ. ನಿಮ್ಮ ಪಕ್ಷದಲ್ಲಿ ಯಾರಾದ್ರೂ ಸಿಎಂ ಅಂದ್ರೆ ಸಾಕು, ನೀವು ನೀವೇ ಪಕ್ಷ ಹಾಳು ಮಾಡ್ತೀರಿ. ನೀವು ಮತ್ತು ಸಿದ್ದರಾಮಯ್ಯ ಜೊತೆಗೆ ಹೋಗುವ ಪರಿಸ್ಥಿತಿ ಕಾಂಗ್ರೆಸ್ ನಲ್ಲಿಲ್ಲ. ಸಿದ್ದರಾಮಯ್ಯನವ್ರಿಗೆ ಅವ್ರದ್ದೇ ಆದ ವರ್ಚಸ್ಸು ಇದೆ. ಸಿದ್ದರಾಮಯ್ಯ ಜೊತೆ ಇರುವ ಶಾಸಕರ ಸಂಖ್ಯೆಯೂ ಜಾಸ್ತಿ ಇದೆ. ಸಿದ್ದರಾಮಯ್ಯರನ್ನ ಸಿಎಂ ಮಾಡ್ತೀವಿ ಅಂದ್ರೆ ಡಿಕೆಶಿ ಆಚೆ ಬರ್ತಾರೆ. ಡಿಕೆಶಿ ಸಿಎಂ ಅಂದ್ರೆ ಸಿದ್ದರಾಮಯ್ಯ ಹೋಗ್ತಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷ 2023ಕ್ಕೆ ಕೊನೆಯಾಗುತ್ತೆ ಎಂದು ಭವಿಷ್ಯ ನುಡಿದರು.
ಆರ್ ಆರ್ ನಗರ ಕ್ಷೇತ್ರದಲ್ಲಿ ನನ್ನ ಪ್ರತಿಸ್ಪರ್ಧಿ ಜೆಡಿಎಸ್, ಕಾಂಗ್ರೆಸ್ ಅಲ್ಲ. ಮೊದಲು ಚುನಾವಣೆಯಲ್ಲಿ ಸ್ಪರ್ಧಿಸಿದಾಗಲೂ ಜೆಡಿಎಸ್ ಪ್ರತಿಸ್ಪರ್ಧಿ ಆಗಿತ್ತು. ಕ್ಷೇತ್ರದಲ್ಲಿ ಜೆಡಿಎಸ್ ಗೆ ತನ್ನದೇ ಆದ ಮತಗಳಿವೆ. 2013 ರಲ್ಲಿ ನನ್ನ ಪ್ರತಿಸ್ಪರ್ಧಿ ಆಗಿದ್ದ ಜೆಡಿಎಸ್ ನ ತಿಮ್ಮನಂಜಯ್ಯ ಕೇವಲ 8 ಸಾವಿರ ಮತಗಳಿಂದ ಸೋತಿದ್ರು. ಇಲ್ಲಾಂದಿದ್ರೆ ತಿಮ್ಮನಂಜಯ್ಯರೇ ಆಗ ಶಾಸಕರಾಗ್ತಿದ್ರು ಎಂದರು.