ಉಡುಪಿ: ಭಕ್ತ ಕನಕದಾಸರ 533ನೇ ಜಯಂತಿಯನ್ನು ಉಡುಪಿ ಜಿಲ್ಲಾಡಳಿತದ ವತಿಯಿಂದ ಆಚರಿಸಲಾಯಿತು. ಮಣಿಪಾಲದಲ್ಲಿರುವ ರಜತಾದ್ರಿಯಲ್ಲಿ ಭಕ್ತ ಕನಕದಾಸರ ಜಯಂತಿಯನ್ನು ಈ ಬಾರಿ ಕೊರೊನ ಇರೋದರಿಂದ ಈ ಬಾರಿ ಸರಳವಾಗಿ ಆಚರಿಸಲಾಯಿತು. ಸಚಿವ ಬಸವರಾಜ್ ಬೊಮ್ಮಾಯಿ ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು.
ಈ ಸಂದರ್ಭದಲ್ಲಿ ಮಾತನಾಡಿದ ಬೊಮ್ಮಾಯಿ, ಭಕ್ತನ ಭಕ್ತಿ ದೇವರಿಗಿಂತ ದೊಡ್ಡದು. ಕನಕದಾಸರು ಭಕ್ತನನ್ನು ಶ್ರೇಷ್ಠ ಎಂದು ಸಾಬೀತುಪಡಿಸಿದ್ದಾರೆ. ಅವರು ಸದಾ ಪ್ರಸ್ತುತ, ಕ್ರಾಂತಿಕಾರರು ಹಾಗೂ ಸಮಾಜಸುಧಾರಕರು ಹೌದು. ಕನಕ ಬಸವ ಬುದ್ಧ ಎಲ್ಲಾ ಕಾಲಕ್ಕೂ ಸಲ್ಲುವವರು. ಇವರ ವಿಚಾರವು ಕಾಲಾತೀತ. ಕನಕ ಜಯಂತಿ ನಾಡಹಬ್ಬ ಆಗಬೇಕು. ಅವರ ಪ್ರತಿ ವಿಚಾರ ಮನೆ-ಮನೆಗಳಲ್ಲಿ ಸ್ಥಾಪನೆಯಾಗಬೇಕು ಎಂದರು.
ಸಂಪನ್ಮೂಲ ವ್ಯಕ್ತಿಯಾಗಿ ಪ್ರೊಫೆಸರ್ ವರದೇಶ್ ಹಿರೇಗಂಗೆ ಮಾತನಾಡಿ, ಕನಕದಾಸರು ಈ ಕಾಲಕ್ಕೆ ಬಹಳ ಪ್ರಸ್ತುತರು. ಆಧ್ಯಾತ್ಮ ಚಿಂತನೆಯ ಮೂಲಕ ಮೇಲು-ಕೀಳು ಮತ್ತು ತಾರತಮ್ಯವನ್ನು ಹೋಗಲಾಡಿಸಲು ಪ್ರಯತ್ನಿಸಿದ ಮಹಾನುಭಾವರು. ಆಧ್ಯಾತ್ಮದ ಅಂತಿಮ ಗುರಿ ಏನಿದ್ದರೂ ಅದು ಸರ್ವಸಮಾನತೆ ಎಂದು ಕನಕದಾಸರು ಪ್ರತಿಪಾದಿಸಿದ್ದರು. ಕನಕದಾಸರು ಕಲಿಯೂ ಕವಿ, ಭಕ್ತ, ದಾಸ, ದಾರ್ಶನಿಕ, ಬಂಡಾಯಕಾರ ಹಾಗೂ ಸಮಾಜಸುಧಾರಕರೂ ಹೌದು ಎಂದರು.
ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಜಗದೀಶ್ ಅಧಿಕಾರಿ, ಉಡುಪಿಯ ಕುರುಬ ಸಂಘಟನೆಗಳು ಭಕ್ತ ಕನಕದಾಸರ ಅನುಯಾಯಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.