ಕಲಬುರಗಿ: ಕ್ವಾರಂಟೈನ್ ಕೇಂದ್ರದಿಂದ ಆಸ್ಪತ್ರೆಗೆ ಸೇರುವ ಮಾರ್ಗ ಮಧ್ಯೆ ಗರ್ಭಿಣಿಗೆ ಹೆರಿಗೆಯಾಗಿದ್ದು, ದುರಾದೃಷ್ಟವಶಾತ್ ಮಗು ಸಾವನ್ನಪಿದ ಕರುಣಾಚನಕ ಘಟನೆ ಇಂದು ಜಿಲ್ಲೆಯಲ್ಲಿ ನಡೆದಿದೆ.
ಮಹಾರಾಷ್ಟ್ರದ ಪುಣೆಯಿಂದ ಜೂನ್ 11ರಂದು ಬಂದಿದ್ದ 35 ವರ್ಷದ ಗರ್ಭಿಣಿ ಹಾಗೂ ಅವರ ಕುಟುಂಬಸ್ಥರನ್ನು ಸೇಡಂ ಪಟ್ಟಣದ ಲಾಡ್ಜ್ ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಇಂದು ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡು ಬಳಲುತ್ತಿದ್ದರು. ಇದರಿಂದಾಗಿ ಕ್ವಾರಂಟೈನ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಅಂಬುಲೆನ್ಸ್ ವ್ಯವಸ್ಥೆ ಕಲ್ಪಿಸಿ ಕಲಬುರಗಿಯ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಟ್ಟಿದ್ದರು.
ಸೇಡಂನಿಂದ ಕಲಬುರಗಿಗೆ ಬರುವ ಮಾರ್ಗ ಮಧ್ಯೆ ಮಹಿಳೆ ಅಂಬುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದರು. ತಕ್ಷಣವೇ ಮೃತ ಮಗುವಿನ ಜೊತೆಗೆ ಮಹಿಳೆಯನ್ನು ಕಲಬುರಗಿ ಜಿಮ್ಸ್ ಗೆ ದಾಖಲು ಮಾಡಲು ಆರೋಗ್ಯ ಇಲಾಖೆ ಸಿಬ್ಬಂದಿ ಮುಂದಾಗಿದ್ದರು. ಆದರೆ ಕಲಬುರಗಿ ಸಮೀಪ ಇರುವಾಗಲೇ ಮಗು ಸಾವನ್ನಪ್ಪಿದೆ. ಮಗುವನ್ನು ಕಳೆದುಕೊಂಡ ತಾಯಿಯ ಆಕ್ರಂದನ ಮುಗಿಲು ಮುಟ್ಟಿತ್ತು. ಆಕೆಯ ಸ್ಥಿತಿಯನ್ನು ಕಂಡು ವೈದ್ಯರು ಹಾಗೂ ಜನರು ಕಣ್ಣೀರಾದರು.