ಬೆಂಗಳೂರು: ಬರೀ ಕಣ್ಣೀರು ಹಾಕಿದರೆ ಮತದಾರರು ಕರಗುವುದಿಲ್ಲ ಎಂದು ಉಪಚುನಾವಣಾ ಫಲಿತಾಂಶದಲ್ಲಿ ಜಯಗಳಿಸಿರುವ ಮುನಿರತ್ನ ಅವರು ಕಾಂಗ್ರೆಸ್ಸಿನ ಕುಸುಮಾಗೆ ಟಾಂಗ್ ನೀಡಿದ್ದಾರೆ.
ಗೆಲುವು ಸಾಧಿಸಿರುವ ಮುನಿರತ್ನ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಮೊದಲು ರಾಜರಾಜೇಶ್ವರಿ ನಗರದ ಮತದಾರರಿಗೆ ಧನ್ಯವಾದ ತಿಳಿಸಿದರು. ಇದೇ ವೇಳೆ ಪ್ರತಿಸ್ಪರ್ಧಿ ಬಗ್ಗೆ ಮಾತನಾಡಿ, ಸತ್ಯ ಮಾತಾಡಿ. ಕೊನೆಯ ಕ್ಷಣದಲ್ಲಿ ನಾನು ಬಳಸದೇ ಇರುವ ಪದವನ್ನು ಬಳಸಿದ್ದೇನೆ ಅಂತ ಕಣ್ಣೀರು ಹಾಕಿದ್ದೀರಲ್ವ ಅದಕ್ಕಿಂತ ದೊಡ್ಡ ತಪ್ಪು ಇನ್ಯಾವುದೂ ಇಲ್ಲ. ಇನ್ನು ಮುಂದೆ ಇಂತಹ ತಪ್ಪುಗಳನ್ನು ಮಾಡಬೇಡಿ. ನನ್ನ ಬಾಯಲ್ಲಿ ಕೊನೆಯುಸಿರು ಇರುವವರೆಗೆ ಯಾವುದೇ ಹೆಣ್ಣು ಮಗಳಿಗೆ ಕೆಟ್ಟದಾಗಿ ಬೈದಿಲ್ಲ, ಬೈಯೋದೂ ಇಲ್ಲ. ಅಂತಹ ಪಾಪದ ಕೆಲಸ, ಪಾಪದ ಮಾತುಗಳು ನನ್ನ ಬಾಯಲ್ಲಿ ಬರಲ್ಲ. ಆದರೂ ಅಂತಹ ಪಾಪದ ಪದವನ್ನು ನಾನು ಉಪಯೋಗಿಸಿದ್ದೀನಿ ಎಂದು ಕಣ್ಣೀರು ಹಾಕಿದ್ರಿ. ಹೀಗಾಗಿ ಇನ್ನು ಮುಂದಕ್ಕಾದರೂ ಸತ್ಯ ಮಾತಾಡಿ ಎಂದು ಸಲಹೆ ಎಂದರು.
ಈ ಕ್ಷೇತ್ರಕ್ಕೆ ನ್ಯಾಯ ಒದಗಿಸುತ್ತೇನೆ. ಹಾಗೆಯೇ ಕ್ಷೇತ್ರದ ಅಭಿವೃದ್ಧಿ ಆಗಬೇಕು. ಹಳೆಯ ಬೆಂಗಳೂರು ಸುಮಾರು 50 ವರ್ಷಗಳಿಂದ ಅಭಿವೃದ್ಧಿ ಆಗಿದೆ. ಅದಕ್ಕಿಂತ ಉತ್ತಮವಾದ ರೀತಿಯಲ್ಲಿ ನಮ್ಮ ಕ್ಷೇತ್ರ ಅಭಿವೃದ್ಧಿಯಾಗಬೇಕು ಎಂದರು. ಇದನ್ನೂ ಓದಿ: ಶಿರಾದಲ್ಲಿ 15 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸುತ್ತೇವೆ: ವಿಜಯೇಂದ್ರ
ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡಿರುವುದಕ್ಕೆ ಖಂಡಿತವಾಗಿ ಪ್ರಾಮಾಣಿಕವಾಗಿ ಸೇವೆ, ಕೆಲಸ ಮಾಡುತ್ತೇನೆ. ನಮಗೆ ಇನ್ನೂ ಎರಡೂವರೆ ವರ್ಷ ಸಮಯಾವಕಾಶ ಇದೆ. ಅಷ್ಟರೊಳಗಡೆ ನಾನು ನನ್ನ ಶಕ್ತಿ ಮೀರಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡುತ್ತೇನೆ. ಒಟ್ಟಿನಲ್ಲಿ ಕ್ಷೇತ್ರದ ಅಭಿವೃದ್ಧಿ ಮಾಡುವ ಮೂಲಕ ಜನರ ಋಣ ತೀರಿಸುವುದಾಗಿ ಚಾಮುಂಡೇಶ್ವರಿ ಮೇಲೆ ಆಣೆ ಪ್ರಮಾಣ ಮಾಡುವುದರೊಂದಿಗೆ ಕ್ಷೇತ್ರದ ಜನರಿಗೆ ಭರವಸೆ ನೀಡಿದರು.
ಕಳೆದ ಬಾರಿ ಸುಮಾರು 26 ಸಾವಿರ ಲೀಡ್ ಬಂದಿತ್ತು. ಆದರೆ ಈ ಬಾರಿ ಸುಮಾರು 57 ಸಾವಿರ ಲೀಡ್ ಬಂದಿದೆ. ಇದು ನನ್ನ ಕ್ಷೇತ್ರದ ಮತದಾರ ದೇವರುಗಳು ನನ್ನ ಮೇಲೆ ಇಟ್ಟಿರುವ ನಂಬಿಕೆಯಾಗಿದೆ. ಮೊದಲನೇ ಚುನಾವಣೆ 17 ಸಾವಿರ, ಎರಡನೇ ಚುನಾವಣೆ 26 ಸಾವಿರ ಹಾಗೂ ಮೂರನೇ ಚುನಾವಣೆ 57 ಸಾವಿರ ಎಂದು ತಿಳಿಸಿದರು.
ನನ್ನ ಗೆಲುವಿಗೆ ಭಾರತೀಯ ಜನತಾ ಪಾರ್ಟಿ, ನಾಯಕರು, ಮುಖ್ಯಮಂತ್ರಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಎಲ್ಲಾ ಸಚಿವರು, ಶಾಸಕರ ಮಿತ್ರರು ಹಾಗೂ ಕಾರ್ಯಕರ್ತರು ಕಾರಣವಾಗಿದ್ದು, ಪ್ರತಿಯೊಬ್ಬರಿಗೂ ಈ ಅಂತರವನ್ನು ಅರ್ಪಿಸುವುದಾಗಿ ತಿಳಿಸಿದರು.
ಆರ್.ಆರ್. ನಗರ ಮತ ಎಣಿಕೆ ಮುಕ್ತಾಯಗೊಂಡಿದ್ದು, ಮುನಿರತ್ನ ಅವರು 57936 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಬಿಜೆಪಿ ಅಭ್ಯರ್ಥಿ ಕಳೆದ ಚುನಾವಣೆಗಿಂದ ಎರಡು ಪಟ್ಟು ಮತ ಪಡೆದು ಗೆಲುವು ಕಂಡಿದ್ದಾರೆ. ಸದ್ಯ ಚುನಾವಣೆ ಅಧಿಕಾರಿಯಿಂದ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.
* ಬಿಜೆಪಿ ಪಡೆದ ಮತ-125734
* ಕಾಂಗ್ರೆಸ್ ಪಡೆದ ಮತ -67798
* ಜೆಡಿಎಸ್ ಪಡೆದ – 10251
* ಬಿಜೆಪಿ ಲೀಡ್- 57936