ಮಂಗಳೂರು: ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಬೈಕ್ ಚಲಾಯಿಸುವ ಜಾದೂ ಸಾಹಸವನ್ನು ಆರಂಭಿಸಿರುವ ಹೈದರಾಬಾದಿನ ಖ್ಯಾತ ಜಾದೂಗಾರ ರಾಮಕೃಷ್ಣರವರು ಇಂದು ಮಂಗಳೂರಿಗೆ ಆಗಮಿಸಿದರು.
ಮಂಗಳೂರಿನ ಜಾದೂಗಾರ ಕುದ್ರೋಳಿ ಗಣೇಶ್ ನೇತೃತ್ವದ ವಿಸ್ಮಯ ಜಾದೂ ಪ್ರತಿಷ್ಠಾನ, ಜೆಸಿಐ ಮಂಗಳೂರು – ಲಾಲ್ ಭಾಗ್, ಎವನ್ ಲಾಜಿಕ್ ಸಂಸ್ಥೆ ಹಾಗೂ ಮಂಗಳಾ ಮ್ಯಾಜಿಕ್ ವರ್ಲ್ಡ್ ಸಂಸ್ಥೆಯ ವತಿಯಿಂದ ಅವರಿಗೆ ಸ್ವಾಗತ ನೀಡಲಾಯಿತು.
ಎ ವನ್ ಲಾಜಿಕ್ ಸಂಸ್ಥೆಯ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಜಾದೂಗಾರ ರಾಮಕೃಷ್ಣ, ಭಾರತ್ ಸಂದೇಶ್ ಯಾತ್ರ ಹೆಸರಿನ ಈ ಜಾದೂ ಪಯಣವು ಮಾರ್ಚ್ 19 ರಂದು ಹೈದಾರಾಬಾದ್ ನಲ್ಲಿ ಆರಂಭಗೊಂಡಿದ್ದು 31 ದಿನಗಳಲ್ಲಿ 10,000 ಕಿಲೋ ಮೀಟರ್ ಕ್ರಮಿಸುವ ಗುರಿ ಹೊಂದಿದೆ. ಭಾರತದ 19 ರಾಜ್ಯಗಳನ್ನು ಹಾಗೂ 121 ಜಿಲ್ಲೆಗಳನ್ನು ಹಾದು ಹೋಗಲಿದೆ ಎಂದು ಹೇಳಿದರು. ಇದೇ ವೇಳೆ ಕೊರೊನಾ ರೋಗದ ಎಚ್ಚರಿಕೆ, ರಸ್ತೆ ಸುರಕ್ಷತೆ ಹಾಗೂ ರಾಷ್ಟ್ರ ಪ್ರೇಮದ ಸಂದೇಶಗಳನ್ನು ಭಾರತ ಸಂದೇಶ್ ಯಾತ್ರೆಯಲ್ಲಿ ನೀಡಲಾಗುವುದು ಎಂದೂ ಅವರು ತಿಳಿಸಿದರು.
ಜಾದೂಗಾರ ಕುದ್ರೋಳಿ ಗಣೇಶ್ ಮಾತನಾಡಿ, ಭಾರತ ಸಂದೇಶ್ ಯಾತ್ರೆಯನ್ನು ಕೈಗೊಂಡಿರುವ ಜಾದೂಗಾರ ರಾಮಕೃಷ್ಣರವರು ಭಾರತೀಯ ಜಾದೂ ರಂಗಕ್ಕೆ ದೊಡ್ದ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು.
ಜೆಸಿಐ ಮಂಗಳೂರು – ಲಾಲ್ ಭಾಗ್ ಇದರ ಅಧ್ಯಕ್ಷರಾದ ಶ್ರೀ ಪ್ರಶಾಂತ್ ಶೆಟ್ಟಿಯವರು ಸಾಮಾಜಿಕ ಜಾಗೃತಿಯನ್ನು ಮೂಡಿಸುವ ಜಾದೂಗಾರ ರಾಮಕೃಷ್ಣರ ಪ್ರಯತ್ನವನ್ನು ಶ್ಲಾಘಿಸಿದರು. ಎ ವನ್ ಲಾಜಿಕ್ ಸಂಸ್ಥೆಯ ಶ್ರೀ ಪವೀಣ್ ಉಡುಪ ಮಾತನಾಡಿ, ಈಗ ಕಣ್ಣು ಬಿಟ್ಟುಕೊಂಡೇ ಬೈಕ್ ಚಲಾಯಿಸುವುದೇ ಕಷ್ಣ ಆಗಿರುವಾಗ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಭಾರತದಾದ್ಯಂತ ಬೈಕ್ ಚಲಾಯಿಸುವುದು ನಿಜವಾಗಿಯೂ ವಿಸ್ಮಯ, ಈ ಸಾಹಸ ಕೈಗೊಂಡಿರುವ ಜಾದೂಗಾರ ರಾಮಕೃಷ್ಣರವರಿಗೆ ಎಲ್ಲರೂ ಬೆಂಬಲಿಸಬೇಕು ಎಂದು ಅಭಿಪ್ರಾಯಪಟ್ಟರು.
ಮಂಗಳಾ ಮ್ಯಾಜಿಕ್ ವಲ್ರ್ಡ್ ಇದರ ಮುಖ್ಯಸ್ಥರಾದ ಜಾದೂಗಾರ ರಾಜೇಶ್ ಮಳಿ, ಜೆಸಿಐ ಮಂಗಳೂರು ಲಾಲ್ ಭಾಗ್ ಇದರ ಸ್ಥಾಪಕ ಅಧ್ಯಕ್ಷರಾದ ಶ್ರೀ ಪೀಟರ್ ಪಿಂಟೋ ಉಪಸ್ಥಿತರಿದ್ದರು. ವಿಸ್ಮಯ ಜಾದೂ ಪ್ರತಿಷ್ಠಾನ ಹಾಗೂ ಜೆಸಿಐ ಸಂಸ್ಥೆಯ ವತಿಯಿಂದ ಜಾದೂಗಾರ ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು. ರಾಮಕೃಷ್ಣ ಇವರು ವಿವಿಧ ಸಾಮಾಜಿಕ ಸಂದೇಶಗಳನ್ನು ಸಾರುವ ಜಾದೂಗಳನ್ನು ಪ್ರದರ್ಶಿಸಿ ನೆರೆದಿದ್ದವರನ್ನು ರಂಜಿಸಿದರು.
ಬಳಿಕ ಸಾರ್ವಜನಿಕರ ಸಮ್ಮುಖದಲ್ಲಿ ಜಾದೂಗಾರ ರಾಮಕೃಷ್ಣ ಇವರ ಕಣ್ಣುಗಳ ಮೇಲೆ ಹತ್ತಿ ಉಂಡೆ ಇರಿಸಿ ಕಪ್ಪು ಪಟ್ಟಿಯಿಂದ ಬಿಗಿದು ಕಟ್ಟಲಾಯಿತು. ಬಳಿಕ ಇಡೀ ತಲೆಯನ್ನು ಕಪ್ಪು ಚೀಲದಿಂದ ಮುಚ್ಚಲಾಯಿತು. ಈ ಕುರುಡು ಸ್ಥಿತಿಯಲ್ಲಿ ಜಾದೂಗಾರ ರಾಮಕೃಷ್ಣ ರವರು ಬೈಕ್ ಹತ್ತಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಸಾಗುವ ಭಾರತ ಸಂದೇಶ ಯಾತ್ರೆಯನ್ನು ಮುಂದುವರಿಸಿದರು.