ಕೊಪ್ಪಳ: ಕೂಲಿಕಾರರ ಸಮಸ್ಯೆ ಹಾಗೂ ಅಧಿಕ ಕೂಲಿ ಹಣ ಸೇರಿದಂತೆ ನಾನಾ ಸಮಸ್ಯೆಗಳಿಂದ ಕಂಗಾಲಾಗಿದ್ದ ಭತ್ತ ಬೆಳೆದಿರುವ ರೈತರು ಸದ್ಯ ಡ್ರೋಣ್ ಬಳಸಿ ಬೆಳೆಗೆ ರಾಸಾಯನಿಕವನ್ನು ಸಿಂಪಡನೆ ಮಾಡಲು ಮುಂದಾಗಿದ್ದಾರೆ.
ಭತ್ತದ ಕಣಜ ಗಂಗಾವತಿ ತಾಲೂಕಿನ ಜಂಗಮರ ಕಲ್ಗುಡಿ, ಹೊಸ್ಕೇರಾ, ಬೂದಗುಂಪಾ, ಶ್ರೀರಾಮನಗರ ಸೇರಿದಂತೆ ನಾನಾ ಭಾಗಗಳಲ್ಲಿ ಭತ್ತ ಬೆಳೆದಿರುವ ರೈತರು ಸೇರಿಕೊಂಡು ಭತ್ತದ ಕ್ರಿಮಿನಾಶಕವನ್ನು ಹಾಕಲು ಡ್ರೋಣ್ ಮೊರೆ ಹೋಗಿದ್ದಾರೆ. ಕೂಲಿಕಾರರ ಸಮಸ್ಯೆಯನ್ನು ಎದುರಿಸುತ್ತಿರುವ ರೈತರು ಅಧಿಕ ಕೂಲಿಯನ್ನು ನೀಡಿದರು ಸಹ ಸಮಯಕ್ಕೆ ಸರಿಯಾಗಿ ಕೆಲಸಗಾರರು ದೊರೆಯುತ್ತಿಲ್ಲ. ಇದರಿಂದ ಬೇಸತ್ತಿರುವ ರೈತರು ಅನಿವಾರ್ಯ ಎನ್ನುವಂತೆ ಡ್ರೋಣ್ ಬಳಕೆಗೆ ಮುಂದಾಗಿ ರೋಗದಿಂದ ಭತ್ತವನ್ನು ಕಾಪಾಡಲು ಪರ್ಯಾಯವನ್ನು ಮಾರ್ಗವನ್ನು ಕಂಡುಕೊಂಡಿದ್ದಾರೆ.
Advertisement
Advertisement
ಈಗಾಗಲೇ ಜಂಗಮರ ಕಲ್ಗುಡಿ ಗ್ರಾಮದಲ್ಲಿ 10 ಎಕರೆ ಜಮೀನಿನಲ್ಲಿ ಬೆಳೆದಿರುವ ಭತ್ತಕ್ಕೆ ಪ್ರಾಯೋಗಿಕವಾಗಿ ಡ್ರೋಣ್ ಮೂಲಕ ರಾಸಾಯನಿಕ ಸಿಂಪಡನೆಯನ್ನು ಮಾಡಲಾಗಿದೆ. ಹಂತ ಹಂತವಾಗಿ ಹೊಸ್ಕೇರಾ, ಶ್ರೀರಾಮನಗರ, ಸಿದ್ದಪೂರ ಸೇರಿದಂತೆ ನಾನಾ ಗ್ರಾಮಗಳಲ್ಲಿ ಇಚ್ಛಿಸುವ ರೈತರ ಜಮೀನುಗಳಲ್ಲಿ ಸಿಂಪಡಿಸಲಾಗುವುದು.
Advertisement
Advertisement
ಬಾಡಿಗೆಗೆ ಡ್ರೋಣ್: ತಮಿಳುನಾಡಿನಿಂದ ಬಾಡಿಗೆ ರೂಪದಲ್ಲಿ ಡ್ರೋಣ್ ಅನ್ನು ತೆಗೆದುಕೊಂಡು ಬಂದು ಬಳಸಲಾಗುತ್ತಿದೆ. ಪ್ರತಿ ಎಕರೆಗೆ ರಾಸಾಯನಿಕ ಸಿಂಪಡನೆ ಮಾಡಲು 600 ರೂಗಳನ್ನು ನಿಗದಿಗೊಳಿಸಲಾಗಿದೆ. ಬಾಡಿಗೆ ತಂದಿರುವ ಕಂಪನಿಯವರೇ ಡ್ರೋಣ್ ನಿರ್ವಹಣೆಯನ್ನು ಮಾಡುತ್ತಾರೆ. ಡ್ರೋಣ್ ಬಳಕೆಯ ಮೂಲಕ ಸಮಯ ಹಾಗೂ ಹಣದ ಉಳಿತಾಯವಾಗುತ್ತದೆ ಎನ್ನುವ ಮನೋಭಾವನೆಯಲ್ಲಿ ರೈತರು ಇದ್ದಾರೆ. ಡ್ರೋಣ್ ಮೂಲಕ 5 ರಿಂದ 6 ನಿಮಿಷದಲ್ಲಿ ಒಂದು ಎಕರೆ ಜಮೀನಿಗೆ ರಾಸಾಯನಿಕ ಸಿಂಪಡನೆ ಮಾಡಬಹುದು.
ಒಂದು ದಿನಕ್ಕೆ 50 ಎಕರೆ ಜಮೀನು ಸಿಂಪಡನೆಯನ್ನು ಮಾಡಬಹುದು. ಈ ರೀತಿಯ ಸಾಮರ್ಥ್ಯವನ್ನು ಡ್ರೋಣ್ ಹೊಂದಿರುವುದರಿಂದ ಕಡಿಮೆ ಸಮಯದಲ್ಲಿಯೇ ಹೆಚ್ಚಿನ ಪ್ರಮಾಣದ ಜಮೀನಿಗೆ ರಾಸಾಯನಿಕ ಸಿಂಪಡಿಸಲು ಗಂಗಾವತಿ ತಾಲೂಕಿನ ರೈತರು ಆಸಕ್ತಿ ತೋರಿಸುತ್ತಿದ್ದಾರೆ.