ಕಡಿಮೆ ದರಕ್ಕೆ ಖರೀದಿಸಿ ದುಬಾರಿ ಬೆಲೆಗೆ ಖಾಸಗಿ ಆಸ್ಪತ್ರೆಗಳಿಗೆ ಪಂಜಾಬ್ ಸರ್ಕಾರದಿಂದಲೇ ಲಸಿಕೆ ಮಾರಾಟ

Public TV
2 Min Read
panjab amarindar singh

– ಸಿಎಂ ಅಮರೀಂದರ್ ಸರ್ಕಾರದ ನಡೆಗೆ ಟೀಕೆ
– ತನ್ನ ನಡೆಯನ್ನು ಸಮರ್ಥಿಸಿಕೊಂಡ ಸರ್ಕಾರ

ನವದೆಹಲಿ: ಕೇಂದ್ರ ಸರ್ಕಾರ ಸರಿಯಾಗಿ ಲಸಿಕೆ ವಿತರಣೆ ಮಾಡುತ್ತಿಲ್ಲ ರಾಜ್ಯಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಕಾಂಗ್ರೆಸ್ ದೂರುತ್ತಿದೆ. ಆದರೆ ಕಾಂಗ್ರೆಸ್ ಆಡಳಿತ ಇರುವ ಪಂಜಾಬ್ ಕಡಿಮೆ ದರದಲ್ಲಿ ಲಸಿಕೆ ಖರೀದಿಸಿ ಅದನ್ನು ದುಬಾರಿ ಬೆಲೆಗೆ ಖಾಸಗಿ ಆಸ್ಪತ್ರೆಗಳಿಗೆ ಮಾರಾಟ ಮಾಡುತ್ತಿರುವ ವಿಷಯ ಈಗ ವಿವಾದಕ್ಕೆ ಕಾರಣವಾಗಿದೆ.

ಹೌದು. ಸಿಎಂ ಅಮರೀಂದರ್ ನೇತೃತ್ವದ ಸರ್ಕಾರ ಇತ್ತೀಚೆಗೆ ಹೈದರಾಬಾದ್‍ನಲ್ಲಿರುವ ಭಾರತ್ ಬಯೋಟೆಕ್ ಕಂಪನಿಯಿಂದ 1 ಲಕ್ಷ ಡೋಸ್ ಲಸಿಕೆಯನ್ನು 600 ರೂ.ನಂತೆ ಖರೀದಿಸಿದೆ. ಖರೀದಿಸಿದ ಲಸಿಕೆಯನ್ನು ಜನರಿಗೆ ಉಚಿತವಾಗಿ ನೀಡುವ ಬದಲು ಕನಿಷ್ಠ 20 ಸಾವಿರ ಡೋಸ್‍ಗಳನ್ನು ಖಾಸಗಿ ಆಸ್ಪತ್ರೆಗಳಿಗೆ 1,060 ರೂ.ನಂತೆ ಮಾರಾಟ ಮಾಡಿದೆ.

COVAXIN.1 1 1

ಸರ್ಕಾರ ಒಂದು ಲಸಿಕೆಯನ್ನು ಮಾರಾಟ ಮಾಡಿ 660 ರೂ. ಲಾಭ ಮಾಡಿದರೆ ಖಾಸಗಿ ಆಸ್ಪತ್ರೆಗಳು ಈ ಲಸಿಕೆಯನ್ನು 1,560 ರೂ.ಗೆ ಮಾರಾಟ ಮಾಡುತ್ತಿವೆ. ಈ ಮೂಲಕ 500 ರೂ. ಲಾಭ ಮಾಡುತ್ತಿವೆ. ಈಗ ಈ ವಿಚಾರ ಬಿಜೆಪಿಗೆ ಸಿಕ್ಕಿದ್ದೆ ತಡ ಭಾರೀ ಟೀಕೆ ಮಾಡಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಲು ಆರಂಭಿಸಿದೆ. ಇದನ್ನೂ ಓದಿ: ಜೂನ್‍ನಲ್ಲಿ ಕರ್ನಾಟಕಕ್ಕೆ ಬರಲಿದೆ 58.71 ಲಕ್ಷ ಲಸಿಕೆ – ಕೇಂದ್ರ, ರಾಜ್ಯದ ಪಾಲು ಎಷ್ಟು?

ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ಟ್ವೀಟ್ ಮಾಡಿ, ಕೇಂದ್ರ ಸರ್ಕಾರ ಉತ್ಪಾದಕರಿಂದ ಲಸಿಕೆಯನ್ನು ಖರೀದಿಸಿ 400 ರೂ.ಗೆ ರಾಜ್ಯಗಳಿಗೆ ಮಾರಾಟ ಮಾಡುತ್ತಿದೆ. ಆದರೆ ಪಂಜಾಬ್ ಸರ್ಕಾರ ಖಾಸಗಿ ಆಸ್ಪತ್ರೆಗಳಿಗೆ ಇದನ್ನು 1,060 ರೂ.ಗೆ ಮಾರಾಟ ಮಾಡಿದರೆ, ಖಾಸಗಿ ಆಸ್ಪತ್ರೆಗಳು ಈ ಲಸಿಕೆಯನ್ನು 1,560 ರೂ.ಗೆ ಮಾರಾಟ ಮಾಡುತ್ತಿದೆ. ಉಚಿತವಾಗಿ ನೀಡಬೇಬೇಕಾದ ಲಸಿಕೆಯನ್ನು 3,120 ರೂ. ನೀಡುತ್ತಿದೆ. ಇದುವೇ ಕಾಂಗ್ರೆಸ್ ಪಕ್ಷದ ನೆಚ್ಚಿನ “ಎರಡಕ್ಕೆ ನಾಲ್ಕು ಪಾಲಿಸಿ” ಎಂದು ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.

ಸರ್ಕಾರ ಹೇಳೋದು ಏನು?
ಈ ವಿಚಾರಕ್ಕೆ ಪಂಜಾಬ್ ಸರ್ಕಾರ ಲಸಿಕೆಯ ನೋಡಲ್ ಅಧಿಕಾರಿ ವಿಕಾಸ್ ಗಾರ್ಗ್ ಪ್ರತಿಕ್ರಿಯಿಸಿ, ಲಸಿಕೆ ಸಾಮಾಜಿಕ ಹೊಣೆಗಾರಿಕಾ ನಿಧಿ ಹೆಸರಿನಲ್ಲಿ ಪ್ರತ್ಯೇಕ ಬ್ಯಾಂಕ್ ಖಾತೆಯನ್ನು ತೆರೆದಿದ್ದೇವೆ. ಖಾಸಗಿ ಆಸ್ಪತ್ರೆಗಳು ಈ ನಿಧಿಯಲ್ಲಿ ಹಣವನ್ನು ಠೇವಣಿ ಇಡುತ್ತವೆ. ಲಸಿಕೆ ಮಾರಾಟದಿಂದ ಬಂದ ಹಣವನ್ನು ಈ ಖಾತೆಗೆ ಹಾಕಿ ಮತ್ತೆ ಹೊಸ ಲಸಿಕೆ ಖರೀದಿಸುತ್ತಿದ್ದೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಜುಲೈ ಮಧ್ಯ, ಆಗಸ್ಟ್ ಆರಂಭದಲ್ಲಿ ದಿನಕ್ಕೆ 1 ಕೋಟಿ ಲಸಿಕೆ ಲಭ್ಯ – ಕೇಂದ್ರ

COVAXIN.3

ಪಂಜಾಬ್ ಸರ್ಕಾರದ ಈ ನೀತಿಗೆ ಈಗ ಭಾರೀ ಟೀಕೆಗೆ ಬಂದಿದೆ. ಸರ್ಕಾರ ಜನರಿಗೆ ಉಚಿತವಾಗಿ ಲಸಿಕೆಯನ್ನು ನೀಡಬೇಕು. ಆದರೆ ಇಲ್ಲಿ ಖಾಸಗಿ ಆಸ್ಪತ್ರೆಗಳಿಗೆ ನೆರವಾಗಲು ಈ ರೀತಿಯ ನಿಧಿಯನ್ನು ಸ್ಥಾಪನೆ ಮಾಡಿ ಲಾಭ ಮಾಡಲು ಮುಂದಾಗಿರುವುದು ಸರಿಯಲ್ಲ. ಖಾಸಗಿ ಆಸ್ಪತ್ರೆಗಳು ಉತ್ಪಾದಕರಿಂದ ನೇರವಾಗಿ ಲಸಿಕೆ ಖರೀದಿ ಮಾಡಬೇಕೇ ಹೊರತು ಸರ್ಕಾರದ ಮೂಲಕ ಖರೀದಿ ಮಾಡುವುದು ಸರಿಯಲ್ಲ ಎಂದು ಪಟಿಯಾಲದ ಆಪ್ ನಾಯಕ ಡಾ. ಬಲ್ಬೀರ್ ಸಿಂಗ್ ಟೀಕಿಸಿದ್ದಾರೆ.

COVAXIN.6 1

ಕಾಂಗ್ರೆಸ್ ವಿರುದ್ಧ ಟೀಕೆ ಮುಂದುವರಿಸಿದ ಅನುರಾಗ್ ಠಾಕೂರ್ 11.50 ಲಕ್ಷ ಲಸಿಕೆ ವ್ಯರ್ಥ ಮಾಡಿದ ವಿಚಾರನ್ನು ಉಲ್ಲೇಖಿಸಿ, ಪಂಜಾಬ್ ಸರ್ಕಾರಕ್ಕಿಂತ ರಾಜಸ್ಥಾನ ಸರ್ಕಾರ ಎರಡು ಹೆಜ್ಜೆ ಮುಂದಿದೆ. ಸಾವಿರಾರು ಲಸಿಕೆಗಳು ಕಸದ ತೊಟ್ಟಿಗೆ ಸೇರಿದೆ. ಈ ಮೂಲಕ ಕಾಂಗ್ರೆಸ್ ಜನರ ನಂಬಿಕೆಯನ್ನು ಕಸದ ತೊಟ್ಟಿಗೆ ಎಸೆದಿದೆ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *