ಬೆಂಗಳೂರು: ಸರಿಯಾಗಿ ನಿಯಂತ್ರಣ ಮಾಡದ ಕಾರಣ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ ಎಂದು ಹೇಳಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ಕ್ಲಾಸ್ ತೆಗೆದುಕೊಂಡಿದೆ.
ಎರಡು ವಾರಗಳ ಹಿಂದೆ ಕೊರೊನಾ ಸೋಂಕು ವೇಗವಾಗಿ ಹೆಚ್ಚುತ್ತಿದ್ದ ರಾಜ್ಯಗಳಾದ ಕರ್ನಾಟಕ, ರಾಜಸ್ಥಾನ, ಛತ್ತೀಸಗಡ, ಕೇರಳ ಮತ್ತು ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸರ್ಕಾರವು ಪರಿಣಿತರ ತಂಡವನ್ನು ಕಳುಹಿಸಿತ್ತು. ಸಾಂಕ್ರಾಮಿಕ ರೋಗವನ್ನು ರಾಜ್ಯ ಸರ್ಕಾರಗಳು ಹೇಗೆ ನಿಭಾಯಿಸುತ್ತವೆ ಎಂಬುದರ ಪರಾಮರ್ಶೆ ನಡೆಸಲು ಈ ತಂಡಕ್ಕೆ ಸೂಚಿಸಲಾಗಿತ್ತು.
Advertisement
Advertisement
ಈ ತಂಡ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಈ ವರದಿಯ ಆಧಾರದ ಹಿನ್ನೆಲೆಯಲ್ಲಿ ಸಾಂಕ್ರಾಮಿಕ ರೋಗ ಹರಡುವಿಕೆ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ವಿಫಲವಾಗಿರುವುದರಿಂದ ಕೊರೊನಾ ಸೋಂಕು ಹೆಚ್ಚಲು ಕಾರಣ ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ ಕ್ಲಾಸ್ ತೆಗೆದುಕೊಂಡಿದೆ.
Advertisement
ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಸಂಪರ್ಕಿತರ ಪತ್ತೆ ತೀವ್ರಗೊಳಿಸುವುದು, ಕೊ-ಮಾರ್ಬಿಡ್ ವ್ಯಕ್ತಿಗಳನ್ನು ಗುರುತಿಸಿ, ಚಿಕಿತ್ಸೆ ಕೊಡುವುದು, ಕೊರೊನಾಗಾಗಿಯೇ ನಿಯೋಜನೆಗೊಂಡಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸಾ ಸೌಕರ್ಯ ಹೆಚ್ಚಿಸುವುದು, ಕ್ವಾರಂಟೈನ್, ಐಸೊಲೇಷನ್ ವ್ಯವಸ್ಥೆ ಸುಧಾರಿಸುವುದು, ಟೆಸ್ಟಿಂಗ್ ವ್ಯವಸ್ಥೆ ಇನ್ನಷ್ಟು ಬಲಪಡಿಸುವುದು ಸೇರಿದಂತೆ ಹಲವು ವಿಚಾರದ ಬಗ್ಗೆ ಕೇಂದ್ರ ತಂಡ ಸಲಹೆ ನೀಡಿದೆ. ಸಮಯೋಚಿತ ರೋಗನಿರ್ಣಯ ಮತ್ತು ಅನುಸರಣೆಗೆ ಸಂಬಂಧಿಸಿದ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಕೇಂದ್ರ ತಂಡಗಳು ಮಾರ್ಗದರ್ಶನ ನೀಡುತ್ತವೆ.