ಚಿಕ್ಕಬಳ್ಳಾಪುರ: ರಾಜಕೀಯ ಎನ್ನುವುದು ಜನರು ಕೊಟ್ಟ ಅಧಿಕಾರ. ರಾಜಕಾರಣದಿಂದ ಜನಸೇವೆ ಮಾಡಬೇಕೇ ಹೊರತು ಅದು ವ್ಯಾಪಾರ ವ್ಯವಹಾರ ಅಲ್ಲ. ರಾಜ್ಯದ ಕಟ್ಟ ಕಡೆಯ ವ್ಯಕ್ತಿಗೂ ಸೇವೆ ಸಿಗಬೇಕು ಅದೇ ರಾಜಕಾರಣ ಎಂದು ಪೌರಾಡಳಿತ ಹಾಗೂ ಸಕ್ಕರೆ ಸಚಿವ ಎಂಟಿಬಿ ನಾಗರಾಜ್ ಅವರು ಅಭಿಪ್ರಾಯಾಪಟ್ಟಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಂಟಿಬಿ, ಅಧಿಕಾರಕ್ಕೆ ಹಠ ಮಾಡುವ ಪ್ರಶ್ನೆಯೇ ಇಲ್ಲ. ನಾವು 40 ವರ್ಷದಿಂದ ರಾಷ್ಟ್ರೀಯ ಪಕ್ಷದಲ್ಲಿ ಇದ್ದವರು. ನಮಗೆ ಕೆಲಸ ಮಾಡುವ ಅವಕಾಶ ಸಿಗಬೇಕು. ಅದನ್ನು ಹೊರತುಪಡಿಸಿ ಈ ಪಕ್ಷಕ್ಕೆ ಬಂದು ಇಲ್ಲಿ ಕೈ ಬಾಯಿ ಕಟ್ಟಿ ಕೂರಲಿಕ್ಕೆ ಆಗಲ್ಲ. ರಾಜಕೀಯ ಎನ್ನುವುದು ಜನರು ಕೊಟ್ಟ ಅಧಿಕಾರ. ರಾಜಕಾರಣ ಎಂದರೆ ಜನಸೇವೆ ಮಾಡುವುದು ಎಂದು ನುಡಿದರು. ಇದನ್ನೂ ಓದಿ: ರಮೇಶ್ ಜಾರಕಿಹೊಳಿಗೆ ಇಂದು ಬಿಗ್ ಡೇ – ಅತ್ಯಾಚಾರ ಪ್ರಕರಣ CBIಗೆ ವರ್ಗಾವಣೆ ಆಗುತ್ತಾ..?
ರಮೇಶ್ ಜಾರಕಿಹೊಳಿ ಮತ್ತೆ ಸಂಪುಟ ಸೇರ್ಪಡೆ ವಿಚಾರವಾಗಿ ಪ್ರತಿಕ್ರಿಯಿಸಿದ ಎಂಟಿಬಿ, ಎಲ್ಲ ನಡವಳಿಕೆ ನೋಡಿದ ಬಳಿಕ ಅವರ ಮನಸ್ಸಿಗೆ ಬೇಜಾರು ಆಗಿರುತ್ತೆ. ಅದಕ್ಕೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ ಅಂತ ಹೇಳಿರುತ್ತಾರೆ. ಅವರು ಏನು ತೀರ್ಮಾನ ತೆಗೆದುಕೊಳ್ತಾರೋ ಗೊತ್ತಿಲ್ಲ. ನಾವು 17 ಜನ ಒಗ್ಗಟ್ಟಾಗಿ ಇದ್ದೇವೆ. ಪಕ್ಷ ಮತ್ತು ಹೈಕಮಾಂಡ್ ತೀರ್ಮಾನಕ್ಕೆ ನಾವು ಒಪ್ಪಿಕೊಳ್ಳುತ್ತೇವೆ. 17 ಜನ ಬಂದಿದ್ದೇವೆ ಅವರೆಲ್ಲಾ ಒಗ್ಗಟ್ಟಾಗಿ ಇದ್ದೇವೆ. ರಮೇಶ್ ಜಾರಕಿಹೊಳಿ ಶಾಸಕ ಸ್ಥಾನಕ್ಕೆ ರಾಜೀನಾಮೆ ವಿಚಾರವಾಗಿ ಅವರಿಗೆ ಆತುರದಿಂದ ನಿರ್ಧಾರ ತೆಗೆದುಕೊಳ್ಳಬೇಡಿ, ಸ್ವಲ್ಪ ಕಾಲಾವಕಾಶ ಕೊಡಿ ಎಂದು ನಾವು ಹೇಳಿದ್ದೇವೆ ಎಂದು ತಿಳಿಸಿದರು.