ಹುಬ್ಬಳ್ಳಿ: ಕಟ್ಟಡ ಕಾರ್ಮಿಕನೊಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿ, ಶವವವನ್ನು ಚರಂಡಿಯಲ್ಲಿ ಎಸೆದಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಕೊಲೆಯಾದ ಯುವಕನನ್ನು ಮಾಬುಸಾಬ ಅಲ್ಲಾಭಕ್ಷ ಶಿವಳ್ಳಿ ಎಂದು ಗುರುತಿಸಲಾಗಿದೆ. ಹುಬ್ಬಳ್ಳಿಯ ದೇವಾಂಗಪೇಟೆಯ ನಿವಾಸಿಯಾಗಿದ್ದಾನೆ. ಈತನನ್ನು ಕೊಲೆ ಮಾಡಿ ಚರಂಡಿಯಲ್ಲಿ ಶವವನ್ನು ಎಸೆಯಲಾಗಿದೆ.
ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದ ಮಾಬುಸಾಬ ಅಲ್ಲಾಭಕ್ಷ ಶಿವಳ್ಳಿ ನಿನ್ನೆ ಮಧ್ಯಾಹ್ನ ಕೆಲಸ ಮುಗಿಸಿ ಮನೆಗೆ ಬಂದಿದ್ದನು. ಆದರೆ ಮತ್ತೆ ಮನೆಯಿಂದ ಹೊರಗೆ ಹೋದವನು ಮತ್ತೆ ಸಿಕ್ಕಿದ್ದು ಹೆಣವಾಗಿ. ಕೊಲೆ ಮಾಡಿ ಬೇರೆ ಸ್ಥಳದಿಂದ ತಂದು ದೇವಾಂಗಪೇಟೆ ಚರಂಡಿಯಲ್ಲಿ ಹಾಕಿರಬಹುದೆಂದು ಶಂಕಿಸಲಾಗಿದೆ.
ಮಾಬುಸಾಬ ದಂಪತಿಗೆ ಐವರು ಮಕ್ಕಳಿದ್ದಾರೆ. ಎರಡು ತಿಂಗಳ ಹಿಂದೆ ತನ್ನ ಐದನೇ ಮಗುವನ್ನು ದತ್ತು ನೀಡಿದ್ದನು. ಮಾಬೂಸಾಬ ವಿರುದ್ಧ ಇತ್ತೀಚೆಗೆ ಬೇರೊಬ್ಬ ಮಹಿಳೆಯ ಜೊತೆ ಅನೈತಿಕ ಸಂಬಂಧ ಹೊಂದಿದ ಅರೋಪ ಸಹ ಕೇಳಿ ಬಂದಿತ್ತು.
ಘಟನೆಯ ನಂತರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಅಶೋಕ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ಕಾರಣ ಏನು ಎನ್ನುವ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.