– ಗೆಜ್ಜೆ ಕಟ್ಟಿದ ಆರು ಮೇಳದ ಕಲಾವಿದರು
– ಒಂದೇ ಬಾರಿಗೆ ಆರು ಮೇಳಗಳ ಯಕ್ಷಗಾನ ಪ್ರದರ್ಶನ
ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ಆರು ಮೇಳಗಳ ತಿರುಗಾಟ ಬುಧವಾರ ಆರಂಭಗೊಂಡಿತು.
ಕಲಾವಿದರಿಗೆ ಗೆಜ್ಜೆಗಳನ್ನು ಅರ್ಚಕ ಅನಂತ ಪದ್ಮನಾಭ ಆಸ್ರಣ ನೀಡುವ ಮೂಲಕ ಈ ವರ್ಷದ ತಿರುಗಾಟಕ್ಕೆ ಚಾಲನೆ ನೀಡಲಾಯಿತು. ಆರಂಭದಲ್ಲಿ ಆರು ಮೇಳಗಳ ಭಾಗವತರಾದ ಅಂಡಾಲ ದೇವೀಪ್ರಸಾದ ಶೆಟ್ಟಿ ಬಲಿಪ ಪ್ರಸಾದ ಭಟ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಶ್ರೀನಿವಾಸ್ ಬಳ್ಳಮಂಜ, ಪದ್ಯಾಣ ಗೋವಿಂದ ಭಟ್, ಪುಂಡಿಕಾಯಿ ಗೋಪಾಲಕೃಷ್ಣ ಭಾಗವತರಿಂದ ತಾಳಮದ್ದಲೆ ನಡೆದು ಬಳಿಕ ಪ್ರಾರ್ಥನೆ ನಡೆಯಿತು.
ಕಲಾವಿದರು ದೇವರ ಎದುರು ಕುಣಿದು, ಬಂಗಾರದ ಕಿರೀಟ ಆಯುಧ ಇತ್ಯಾದಿಗಳೊಂದಿಗೆ ಚೌಕಿಗೆ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಅಲ್ಲಿ ಆರು ದೇವರ ಪೂಜೆ ಆರು ರಂಗಸ್ಥಳದಲ್ಲಿ ಏಕಕಾಲದಲ್ಲಿ ವೇಷಗಳು ಪೂರ್ವರಂಗ ಕುಣಿದು ರಂಗಸ್ಥಳಕ್ಕೆ ದೇವರು ಬಂದ ಬಳಿಕ ಒಂದು ರಂಗಸ್ಥಳದಲ್ಲಿ ಆರೂ ಮೇಳಗಳ ಕಲಾವಿದರಿಂದ ಪಾಂಡವಾಶ್ವಮೇಧ ಪ್ರಸಂಗ ನಡೆಯಿತು.
ದೇಗುಲದ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಆಡಳಿತ ಸಮಿತಿ ಅಧ್ಯಕ್ಷ ಸನತ್ ಕುಮಾರ ಶೆಟ್ಟಿ, ಧರ್ಮಸ್ಥಳ ಮೇಳದ ಮುಖ್ಯಸ್ಥರಾದ ಹರ್ಷೇಂದ್ರ ಕುಮಾರ್, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ,ಪಂಚ ಮೇಳಗಳ ಸಂಚಾಲಕ ಕಿಶನ್ ಹೆಗ್ಡೆ, ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ ಮುಂತಾದವರಿದ್ದರು.
ಆರು ಮೇಳಗಳಿಂದ ಭಕ್ತಾದಿಗಳು ಹರಕೆ ಸೇವೆಯಾಟವನ್ನು ಆಡಿಸುತ್ತಾ ದೇವಿಯ ಕೃಪೆಗೆ ಪಾತ್ರರಾಗುತ್ತಾರೆ. ಕಟೀಲು ದೇವಿ ಯಕ್ಷಗಾನ ಪ್ರಿಯೆ ಆಗಿರೋದ್ರಿಂದ ಹೆಚ್ಚಿನ ಭಕ್ತರು ತಮ್ಮ ಕಷ್ಟಕಾಲದಲ್ಲಿ ದೇವಿಗೆ ಹರಕೆಯ ಯಕ್ಷಗಾನ ಸೇವೆ ಕೊಡಿಸುವ ಸಂಕಲ್ಪ ಮಾಡಿರುತ್ತಾರೆ. ಹೀಗಾಗಿ ಮುಂದಿನ 10 ವರ್ಷಗಳವರೆಗೂ ಕಟೀಲು ಕ್ಷೇತ್ರದ ಆರೂ ಮೇಳಗಳ ಆಟ ಬುಕ್ಕಿಂಗ್ ಇದ್ದು, ಇಂದಿಗೂ ಯಕ್ಷಗಾನಕ್ಕೆ ಇಷ್ಟೊಂದು ಬೇಡಿಕೆ ಇರೋದು ದೇವಿಯ ಹಾಗೂ ಯಕ್ಷಗಾನಕ್ಕೆ ಇರುವ ನಂಬಿಕೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಕಟೀಲಿನ ಆರು ಮೇಳಗಳಲ್ಲಿ ಮುನ್ನೂರ ಐವತ್ತರಷ್ಟು ಕಲಾವಿದರು ಇತರ ಸಹಾಯಕರು ಸೇವೆ ಸಲ್ಲಿಸುತ್ತಿದ್ದಾರೆ. ಈ ವರುಷ ಸುಮಾರು 990 ಯಕ್ಷಗಾನ ಪ್ರದರ್ಶನಗಳು ನಡೆಯಲಿದ್ದು, ಮೇ 25ರ ಪತ್ತನಾಜೆಯ ದಿನ ಮೇಳಗಳು ತಿರುಗಾಟ ಮುಗಿಸಲಿವೆ.