-ಪೊಲೀಸರ ಅತಿಥಿಯಾದ ದೂರುದಾರ
ಚಿಕ್ಕಬಳ್ಳಾಪುರ: ನನ್ನನ್ನ ಅಡ್ಡಗಟ್ಟಿದ ದರೋಡೆಕೋರರು ಹಲ್ಲೆ ಮಾಡಿ ನನ್ನ ಬಳಿ ಇದ್ದ ಲಕ್ಷಾಂತರ ರೂಪಾಯಿ ಹಣ ಸುಲಿಗೆ ಮಾಡಿಕೊಂಡು ಹೋದ್ರು ಅಂತ ಪೊಲೀಸ್ ಠಾಣೆಗೆ ದೂರು ನೀಡಿದ ದೂರುದಾರನೇ ಪೊಲೀಸರ ಅತಿಥಿಯಾಗಿ ಜೈಲು ಸೇರಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.
ಕೋಳಿ ಮಾರಾಟ ಮಾಡುವ ಲೋಟಸ್ ಖಾಸಗಿ ಕಂಪನಿಯ ಸೂಪರ್ ವೈಸರ್ ಉದಯ್ ಕುಮಾರ್ ಬಂಧಿತ ದೂರುದಾರ. ಜುಲೈ 21 ರಂದು ಚಿಕ್ಕಬಳ್ಳಾಪುರ ತಾಲೂಕು ಆನೆಮಡುಗು ಗ್ರಾಮದ ಬಳಿಯ ಹರೀಶ್ ಎಂಬುವರಿಗೆ ಸೇರಿದ ಕೋಳಿ ಫಾರಂ ಗೆ ಭೇಟಿ ನೀಡಿ ಅಲ್ಲಿದ್ದ ಕೋಳಿಗಳನ್ನ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದನು. ಮಾರಾಟದಿಂದ ಬಂದ 7 ಲಕ್ಷದ 91 ಸಾವಿರ ರೂಪಾಯಿ ಪಡೆದು ತನ್ನೂರಾದ ಗುಡಿಬಂಡೆ ತಾಲೂಕು ಎಲ್ಲೋಡು ಗ್ರಾಮದತ್ತ ತೆರಳಿದ್ದನು.
Advertisement
Advertisement
ಈ ವೇಳೆ ಕೇತೇನಹಳ್ಳಿ ಬಳಿ ನನ್ನನ್ನು ಅಡ್ಡಗಟ್ಟಿದ್ದ ಗೌರಿಬಿದನೂರು ತಾಲೂಕು ಸಾಗಾನಹಳ್ಳಿ ಗ್ರಾಮದ ಪ್ರಶಾಂತ್, ನರಸಿಂಹಮೂರ್ತಿ, ಪ್ರಥ್ವಿರಾಜ್, ಕಿರಣ್, ನವೀನ್ ಕುಮಾರ್ ಹಲ್ಲೆ ಮಾಡಿ ಹಣ ಕಸಿದುಕೊಂಡು ಹೋದರು ಎಂದು ಉದಯ್ ಕುಮಾರ್ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದನು. ಈ ಸಂಬಂಧ ತನಿಖೆಗಿಳಿದ ಪೊಲೀಸರು ಆರೋಪಿಗಳನ್ನ ಬಂಧಿಸಿ ವಿಚಾರಣೆ ನಡೆಸಿದಾಗ ಇದೆಲ್ಲವೂ ದೂರುದಾರ ಉದಯ್ ಕುಮಾರ್ ಪ್ಲಾನ್ ಎಂಬ ವಿಷಯ ತಿಳಿದಿದೆ. ಉದಯಕುಮಾರ್ ನಮಗೆ ಈ ರೀತಿ ದರೋಡೆ ಮಾಡಿ ತನ್ನ ಕಂಪನಿಯ ಹಣ ಎಗಿರಿಸುವ ಸಂಚು ರೂಪಿಸಿದ್ದನು. ಅವನ ಸೂಚನೆಯಂತೆ ನಾವು ಈ ಕೃತ್ಯ ಮಾಡಿದ್ದೀವಿ ಅಂತ ಬಾಯಿ ಬಿಟ್ಟಿದ್ದಾರೆ.
Advertisement
Advertisement
ಹೀಗಾಗಿ ದೂರುದಾರನನ್ನೇ ಪೊಲೀಸರು ಬಂಧಿಸಿದ್ದಾರೆ. ಸದ್ಯ ಬಂಧಿತರ ಬಳಿ 7 ಲಕ್ಷದ 60 ಸಾವಿರ ಹಾಗೂ ಕೃತ್ಯಕ್ಕೆ ಬಳಿಸಿದ ಇನ್ನೋವಾ ಕಾರು 4 ಮೊಬೈಲ್ ಪೋನ್ ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.