– ಸಚಿವರಿಗೆ ವಿಕ್ಟೋರಿಯಾದಲ್ಲಿ ವಿವರಣೆ ನೀಡಿದ್ದ ವೈದ್ಯೆಗೆ ಪಾಸಿಟಿವ್
ಬೆಂಗಳೂರು: ಬೆಂಗಳೂರು ಕೋವಿಡ್ 19 ನಿರ್ವಹಣೆ ಉಸ್ತುವಾರಿಯನ್ನು ವಹಿಸಿಕೊಂಡಿರುವ, ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಕೊರೊನಾ ಕಂಟಕ ಎದುರಾಗಿದೆ. ಸಚಿವರಿಗೆ ವಿಕ್ಟೋರಿಯಾ ಕೋವಿಡ್-19 ಕೇಂದ್ರದಲ್ಲಿ ವಿವರಣೆ ನೀಡಿದ್ದ ವೈದ್ಯೆಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ.
ವಿಕ್ಟೋರಿಯಾ ಬಿಎಂಸಿ ಕೋರ್ ಕಮಿಟಿಯಲ್ಲಿ ಸದಸ್ಯರಾಗಿರುವ ವೈದ್ಯೆ, ಸಚಿವರು ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಅಲ್ಲಿನ ಸ್ಥಿತಿಗತಿ ಕುರಿತು ವಿವರಣೆ ನೀಡಿದ್ದರು. ಕೋವಿಡ್ ಕೇಂದ್ರದ ಸಮಸ್ಯೆಗಳು, ಆಹಾರ ಗುಣಮಟ್ಟ ಸೇರಿದಂತೆ ಹಲವು ವಿಚಾರಗಳ ಕುರಿತು ಸಚಿವರು ಮಾಹಿತಿ ಪಡೆದು ಪರಿಶೀಲನೆ ನಡೆಸಿದ್ದರು.
Advertisement
Advertisement
ವಿಕ್ಟೋರಿಯಾದಲ್ಲಿ ಇಂದು ವೈದ್ಯೆ, ಸ್ಟಾಫ್ ನರ್ಸ್ ಸೇರಿದಂತೆ ಒಟ್ಟು 11 ಜನರಿಗೆ ಪಾಸಿಟಿವ್ ದೃಢವಾಗಿದೆ. ಸದ್ಯ ವೈದ್ಯೆ ಸಂಪರ್ಕದಲ್ಲಿದ್ದವರನ್ನು ಹೋಂ ಕ್ವಾರಂಟೈನ್ ಮಾಡಲು ಆರೋಗ್ಯ ಇಲಾಖೆ ಅಧಿಕಾರಿಗಳು ಮುಂದಾಗಿದ್ದಾರೆ. ಪರಿಣಾಮ ಸಚಿವ ಆರ್. ಅಶೋಕ್‍ಗೆ ಅವರು ಕೂಡ ಕ್ವಾರಂಟೈನ್ ಆಗುತ್ತಾರಾ ಎಂಬ ಅನುಮಾನ ಎದುರಾಗಿದೆ. ಅಲ್ಲದೇ ಸಚಿವರಿಗೂ ಕೋವಿಡ್ ಪರೀಕ್ಷೆ ನಡೆಸಲಾಗುತ್ತಾ ಎಂದು ಕಾದು ನೋಡಬೇಕಿದೆ.
Advertisement
Advertisement
ಇತ್ತೀಚೆಗಷ್ಟೇ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ತಮ್ಮ ಹೋಂ ಕ್ವಾರಂಟೈನ್ ಅವಧಿ ಮುಗಿಸಿ ಮತ್ತೆ ಕೋವಿಡ್ ನಿಯಂತ್ರಣ ಕಾರ್ಯಕ್ಕೆ ಸಂಬಂಧಿಸಿದ ಸಭೆಗೆ ಹಾಜರಾಗಿದ್ದರು. ಸದ್ಯ ಆರ್.ಅಶೋಕ್ ಅವರು ಕ್ವಾರಂಟೈನ್ ಆಗುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ. ವಿಕ್ಟೋರಿಯಾದಲ್ಲಿ ಸರಿಯಾದ ಸೌಲಭ್ಯಗಳಿಲ್ಲ ಎಂಬ ಬಗ್ಗೆ ಕೇಳಿ ಬರುತ್ತಿದ್ದ ಆರೋಪಗಳ ಹಿನ್ನೆಲೆಯಲ್ಲಿ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಅಲ್ಲದೇ ಮಧ್ಯಾಹ್ನದ ಊಟವನ್ನು ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದರುಗಳ ಜೊತೆಗೆ ಸೇವಿಸಿದ್ದರು. ಸಭೆಯಲ್ಲಿ ಸ್ಥಳೀಯ ಶಾಸಕರು, ಸಂಸದರು ಮತ್ತು ಸಿಎಂ ರಾಜಕೀಯ ಕಾರ್ಯದರ್ಶಿಗಳು ಹಾಜರಾಗಿದ್ದರು.