ಮುಂಬೈ: ನಟಿ ಕಂಗನಾ ರಣಾವತ್ ಅವರ ಗನ್ ಮ್ಯಾನ್ ವಿರುದ್ಧ ಅತ್ಯಾಚಾರದ ಆರೋಪ ಕೇಳಿಬಂದಿದೆ.
ಮುಂಬೈಯ ಮೇಕಪ್ ಕಲಾವಿದೆಯೊಬ್ಬಳು ಕುಮಾರ್ ಹೆಗ್ಡೆ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ ದೂರು ನೀಡಿದ್ದಾಳೆ. ಡಿಎನ್ ನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಕುಮಾರ್ ನಾಪತ್ತೆಯಾಗಿದ್ದಾನೆ.
ಮದುವೆಯಾಗುವುದಾಗಿ ನಂಬಿಸಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದು ಮಾತ್ರವಲ್ಲದೇ 50 ಸಾವಿರ ರೂ. ಹಣವನ್ನು ಪಡೆದು ಮುಂಬೈ ತೊರೆದಿದ್ದಾನೆ ಎಂದು ಸಂತ್ರಸ್ತೆ ಆರೋಪ ಮಾಡಿದ್ದಾಳೆ.
8 ವರ್ಷಗಳ ಹಿಂದೆ ಕುಮಾರ್ ಸಂತ್ರಸ್ತೆಯ ಜೊತೆ ಸಂಪರ್ಕಕ್ಕೆ ಬಂದಿದ್ದು, ಕಳೆದ ವರ್ಷದ ಜೂನ್‍ನಲ್ಲಿ ಮದುವೆಯಾಗುತ್ತೇನೆ ಎಂದು ನಂಬಿಸಿ ತನ್ನ ಪ್ರೇಮ ನಿವೇದನೆಯನ್ನು ಹೇಳಿದ್ದ. ಇದಾದ ಬಳಿಕ ಸಂತ್ರಸ್ತೆಯ ಫ್ಲ್ಯಾಟ್‍ಗೆ ಬಂದು ಹಲವು ಬಾರಿ ಬಲವಂತವಾಗಿ ಅತ್ಯಾಚಾರ ಎಸಗಿದ್ದ.
ಏ.27ಕ್ಕೆ ನಾನು ಆತನಿಗೆ ಹಣವನ್ನು ನೀಡಿದ್ದೆ. ಬಳಿಕ ಆತ ಕರ್ನಾಟಕಕ್ಕೆ ಓಡಿ ಹೋಗಿದ್ದಾನೆ. ಈ ವೇಳೆ ನಾನು ಆತನ ತಾಯಿಗೆ ಕರೆ ಮಾಡಿದಾಗ ಆತ ಬೇರೆಯವರನ್ನು ಮದುವೆಯಾಗುತ್ತಿರುವ ವಿಚಾರ ಗೊತ್ತಾಯಿತು. ಆತನ ತಾಯಿ ನನ್ನ ಮಗನಿಂದ ನೀನು ದೂರ ಇರು ಎಂದು ಹೇಳಿರುವುದಾಗಿ ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಕಂಗನಾ ಅವರೊಂದಿಗೆ ಅನೇಕ ಸಂದರ್ಭಗಳಲ್ಲಿ ಕುಮಾರ್ ಹೆಗ್ಡೆ ಕಾಣಿಸಿಕೊಂಡಿದ್ದು ಆತನ ವಿರುದ್ಧ ಐಪಿಸಿಯ 376 (ಅತ್ಯಾಚಾರ), 377 (ಅಸ್ವಾಭಾವಿಕ ಲೈಂಗಿಕತೆ) ಮತ್ತು 420 (ವಂಚನೆ) ಸೆಕ್ಷನ್ ಅಡಿಯಲ್ಲಿ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಂಗನಾ ಇನ್ನೂ ಈ ಪ್ರಕರಣದ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ. ಕುಮಾರ್ ತನ್ನ ಕುಟುಂಬದ ಸದಸ್ಯ ಎಂದು ಈ ಹಿಂದೆ ಹೇಳಿದ್ದರು.
ಈ ಮೊದಲು, ಕಂಗನಾ ಅವರ ಮಾಜಿ ಕೇಶ ವಿನ್ಯಾಸಕ ಆಲಿಸ್ಟರ್ ಡಿ ಗೀಯನ್ನು ಅಪ್ರಾಪ್ತ ವಯಸ್ಕರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೊ) ಕಾಯ್ದೆಯಡಿ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.