– ರಾಸಾಯನಿಕ, ಕೀಟ ನಾಶಕಗಳ, ಬಳಕೆ ಇಲ್ಲ
– ವಿವಿಧ ರೋಗಗಳಿಗೆ ರಾಮಬಾಣ
ಯಾದಗಿರಿ: ಈ ವರ್ಷ ಮುಂಗಾರು ಮಳೆ ಉತ್ತಮವಾಗಿದ್ದು, ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಸೀತಾಫಲ ಹಣ್ಣಿನ ಘಮ ಹೆಚ್ಚಾಗಿದೆ. ತಾಲೂಕಿನ ಹತ್ತಿಕುಣಿ ವಲಯದ ಕಟಗಿಶಹಾಪುರ, ಬಾಚವಾರ, ಮೋಟ್ಟಳ್ಳಿ, ಯರಗೋಳ, ಹತ್ತಿಕುಣಿ, ಬೆಳಗೇರಾ ಗ್ರಾಮಗಳ ವಿಸ್ತಾರವಾದ ಅರಣ್ಯ ಪ್ರದೇಶದಲ್ಲಿ ಸೀತಾಫಲ ಗಿಡಗಳು ಹೆಚ್ಚಾಗಿದೆ. ಸದ್ಯ ಈ ಪ್ರದೇಶಗಳಲ್ಲಿ ಈಗ ಸೀತಾಫಲ ಹಣ್ಣಿನ ರುಚಿಯದ್ದೆ ಮಾತು.
Advertisement
ಈ ಹಣ್ಣುಗಳಿಗೆ ಯಾವುದೇ ರಾಸಾಯನಿಕ ಗೊಬ್ಬರ, ಕೀಟ ನಾಶಕಗಳ, ಬಳಕೆ ಮಾಡುವುದಿಲ್ಲ. ಇವುಗಳು ಅಚ್ಚ ಹಸಿರಿನ ಬೆಟ್ಟದಲ್ಲಿ ನೈಸರ್ಗಿಕವಾಗಿ ಬೆಳೆಯುತ್ತವೆ. ಔಷಧಿ ಗುಣಹೊಂದಿರುವ ಈ ಸೀತಾಫಲ ಹಣ್ಣು ಮಾನವನ ವಿವಿಧ ರೋಗಗಳಿಗೆ ರಾಮಬಾಣವಾಗಿದೆ. ಹೀಗಾಗಿ ಹತ್ತಿಕುಣಿ ಅರಣ್ಯ ಪ್ರದೇಶದಲ್ಲಿ ವಾಸವಿರುವ ಜನರು ಬೆಳಗ್ಗೆ 6 ಗಂಟೆಯಿಂದಲೇ ಬುಟ್ಟಿಗಳಲ್ಲಿ ಹಣ್ಣುಗಳನ್ನು ತುಂಬಿಕೊಂಡು ಯಾದಗಿರಿ ನಗರದತ್ತ ಬರುತ್ತಾರೆ.
Advertisement
Advertisement
ನಗರದ ಹಳೆ ಬಸ್ ನಿಲ್ದಾಣ, ಹತ್ತಿಕುಣಿ ವೃತ್ತದ ಬಳಿ ನೂರಾರು ಬುಟ್ಟಿಗಳಲ್ಲಿ ರಾಶಿ-ರಾಶಿ ಹಣ್ಣುಗಳನ್ನು ನೋಡುವುದೇ ಕಣ್ಣಿಗೆ ಹಬ್ಬದಂತಿದೆ. ಒಂದು ಬುಟ್ಟಿ ಹಣ್ಣುಗಳಿಗೆ 150ರೂ. ರಿಂದ 300 ರೂ. ವರೆಗೆ ಮಾರಾಟ ಮಾಡಲಾಗುತ್ತಿದೆ. ನೈಸರ್ಗಿಕವಾಗಿ ಬೆಳೆಯುವ ಮತ್ತು ಔಷಧೀಯ ಗುಣ ಹೊಂದಿರುವ ಈ ಹಣ್ಣಿಗೆ ನಗರದಲ್ಲಿ ಭಾರೀ ಬೇಡಿಕೆ ಸಹ ಇದೆ. ಬೆಳಗ್ಗೆಯಿಂದಲೇ ಜನ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟು ತಮ್ಮಿಷ್ಟದ ಹಣ್ಣುಗಳನ್ನು ಖರೀದಿಸುತ್ತಿದ್ದಾರೆ.