ಗದಗ/ ಮೈಸೂರು: ತನ್ನ ತಂದೆ ಮೃತಪಟ್ಟಿದ್ದರೂ ವಿದ್ಯಾರ್ಥಿನಿಯೊಬ್ಬಳು ಎಸ್‍ಎಸ್‍ಎಲ್‍ಸಿ ಪರೀಕ್ಷೆ ಬರೆದ ಕರುಣಾಜನಕ ಘಟನೆ ಗದಗ ನಗರದಲ್ಲಿ ನಡೆದಿದೆ.
ನಗರದ ರೆಡ್ಡಿ ಕಾಲೇಜ್‍ನಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಈ ಘಟನೆ ನಡೆದಿದೆ. ಅನುಷಾ ತನ್ನ ತಂದೆಯನ್ನು ಕಳೆದುಕೊಂಡಿದ್ದು, ದೃತಿಗೆಡದೆ ಪರೀಕ್ಷೆಗೆ ಹಾಜರಾಗಿದ್ದಾಳೆ. ಈಕೆಯ ತಂದೆ ಸುರೇಶ್ ಭಜಂತ್ರಿ ನಗರದ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕಳೆದ ಹಲವು ದಿನಗಳಿಂದ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.
ಇಂದು ಅನುಷಾ ತಂದೆ ಮೃತಪಟ್ಟಿದ್ದಾರೆ. ನೀನು ಪರೀಕ್ಷೆ ಬರೆದು ಬರುವವರೆಗೂ ಅಂತ್ಯಸಂಸ್ಕಾರ ನಡೆಸಲ್ಲ ಎಂದು ಕುಟುಂಬಸ್ಥರು ಅಭಯ ನೀಡಿದ ನಂತರ ಅನುಷಾ ಪರೀಕ್ಷೆ ಬರೆಯಲು ತೆರಳಿದ್ದಾಳೆ. ಈ ವೇಳೆ ಅನುಷಾ ಓದುತ್ತಿರುವ ತೋಂಟದಾರ್ಯ ಶಾಲೆಯ ಸಿಬ್ಬಂದಿ ಹಾಗೂ ಗದಗ ಶಹರ ಬಿಇಒ ಕೆಳದಿಮಠ ಅನುಷಾಗೆ ಮಾನಸಿಕ ಸ್ಥೈರ್ಯ ತುಂಬಿ ಪರೀಕ್ಷಾ ಕೊಠಡಿಗೆ ಕಳಿಸಿದ್ದಾರೆ.
ತಾಯಿಯ ಸಾವಿನ ನಡುವೆ ಪರೀಕ್ಷೆ ಬರೆದ ವಿದ್ಯಾರ್ಥಿನಿ
ತಾಯಿಯ ಸಾವಿನ ನೋವಲ್ಲಿಯೂ ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ವಿದ್ಯಾರ್ಥಿನಿ ಹಾಜರಾಗಿದ್ದಾಳೆ. ಮೈಸೂರು ತಾಲೂಕಿನ ಬಿರಿಹುಂಡಿ ಗ್ರಾಮದ ನಿವಾಸಿ ಲಕ್ಷ್ಮಮ್ಮ ಗುರುವಾರ ಅನಾರೋಗ್ಯದಿಂದ ಮೃತಪಟ್ಟಿದ್ದರು. ಇವರ ಮಗಳು ದೀಪು ತಾಯಿಯ ಸಾವಿನ ನಡುವೆ ಇಂದು ಮೈಸೂರಿನ ರೂಪಾನಗರದಲ್ಲಿರುವ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆದಿದ್ದಾಳೆ.
ತಾಯಿಯ ಸಾವಿನಲ್ಲಿ ಪರೀಕ್ಷೆ ಬರೆಯಲು ವಿದ್ಯಾರ್ಥಿನಿ ಹಿಂಡೇಟು ಹಾಕಿದ್ದಳು. ವಿದ್ಯಾರ್ಥಿನಿಗೆ ಧೈರ್ಯ ತುಂಬಿ ಇವತ್ತಿನ ಹಿಂದಿ ಪರೀಕ್ಷೆಗೆ ಗ್ರಾಮದ ಮುಖಂಡ ಶಿವಣ್ಣ ವಿದ್ಯಾರ್ಥಿನಿಯನ್ನು ಕರೆದುಕೊಂಡು ಬಂದಿದ್ದರು. ಪರೀಕ್ಷೆ ಮುಗಿದ ಬಳಿಕ ತಾಯಿಯ ಅಂತ್ಯ ಸಂಸ್ಕಾರದಲ್ಲಿ ಭಾಗಿಯಾಗಲಿದ್ದಾರೆ.