ಹಾವೇರಿ: ಕೊಬ್ಬರಿ ಹೋರಿ ಸ್ಪರ್ಧೆಗೆ ಹಾವೇರಿ ಜಿಲ್ಲೆ ಫೇಮಸ್ಸ್. ಆದರೆ ಕೊಬ್ಬರಿ ಹೋರಿ ಅಖಾಡದಲ್ಲಿ ಮಿಂಚಿನ ಓಟ ಓಡುತ್ತಲೇ ಹೋರಿಯೊಂದು ಕೆರೆಗೆ ಬಿದ್ದು ಮೃತಪಟ್ಟ ಘಟನೆ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಸುತ್ತಕೋಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಬಳಿ ಇರೋ ಕೆರೆಯ ದಂಡೆಯ ಮೇಲೆ ಹೋರಿ ಓಡಿಸೋ ಹಬ್ಬದಲ್ಲಿ ಈ ದುರ್ಘಟನೆ ನಡೆದಿದೆ. ಅರಳೀಕಟ್ಟಿ ಗ್ರಾಮದ ಪುಟ್ಟಪ್ಪ ಎಂಬವರಿಗೆ ಸೇರಿದ ವರದನಾಯಕ ಹೆಸರಿನ ಹೋರಿ ಇದಾಗಿದೆ. ಹೋರಿ ಕೆರೆಗೆ ಜಿಗಿಯುತ್ತಿದ್ದಂತೆ ಸ್ಥಳೀಯರು ಕೂಡ ಕೆರೆಗೆ ಹಾರಿ ಹೋರಿ ರಕ್ಷಣೆಗೆ ತೆರಳಿದ್ದಾರೆ. ಆದರೆ ಅವರ ಪ್ರಯತ್ನ ವ್ಯರ್ಥವಾಗಿದೆ. ಇನ್ನು ಹೋರಿ ಓಡಿ ಬರುವ ರಭಸಕ್ಕೆ ಕೆರೆಗೆ ಜಿಗಿದ ಅಭಿಮಾನಿ ಈಜಿ ಪಾರಾಗಿದ್ದಾನೆ.
Advertisement
Advertisement
ಅಖಾಡದಲ್ಲಿ ಓಡಿ ಬರುತ್ತಿದ್ದ ಹೋರಿ ನೋಡಿ ಜನ ಓಡಿದ್ದರಿಂದ ದಿಕ್ಕು ತೋಚದೆ ಓಟದ ರಭಸದಲ್ಲಿ ಕೆರೆಗೆ ಹಾರಿದೆ. ಹೋರಿಯ ಕಾಲಿಗೆ ಹಗ್ಗ ಸಿಲುಕಿಕೊಂಡು ಹೋರಿ ಕೆರೆಯಿಂದ ಮೇಲೆ ಬಾರದೇ ದುರಂತ ಸಾವು ಕಂಡಿದೆ. ಹೋರಿ ಸಾವಿಗೆ ಹೋರಿ ಅಭಿಮಾನಿಗಳು ಕಂಬನಿ ಮಿಡಿದ್ದಾರೆ. ವರದನಾಯಕ ಹೋರಿ ಓಡಿ ಬಂದು ಕೆರೆಗೆ ಜಿಗಿಯೋ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.