ಚಿಕ್ಕಮಗಳೂರು: ಅಡುಗೆ ಮಾಡುವ ಒಲೆ ಪಕ್ಕ ಮಲಗಿದ್ದ ಅಪ್ಪ ಹೇಳಿದ ಕೂಡಲೇ ಎದ್ದೇಳಲಿಲ್ಲ ಎಂದು ಒಲೆಯಲ್ಲಿ ಉರಿಯುತ್ತಿದ್ದ ಸೌದೆಯನ್ನ ತೆಗೆದು ಅಪ್ಪನಿಗೆ ಹೊಡೆದು ಮಗನೇ ಕೊಲೆ ಮಾಡಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಬೆಳಗೋಡು ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಬಸಯ್ಯ (63) ಎಂದು ಗುರುತಿಸಲಾಗಿದೆ. 33 ವರ್ಷದ ಮಂಜುನಾಥ್ ಅಪ್ಪನನ್ನೇ ಕೊಲೆಗೈದಿರುವ ಪುತ್ರ.
ಮೃತ ಬಸಯ್ಯನಿಗೆ ಇಬ್ಬರು ಪುತ್ರರು. ಹಿರಿಯ ಮಗ ಮದುವೆಯಾಗಿ ಬಣಕಲ್ ಬಳಿ ಹಳ್ಳಿಯೊಂದರಲ್ಲಿ ಬೇರೆ ವಾಸವಿದ್ದಾನೆ. ಕಿರಿಯ ಮಗ ಮಂಜುನಾಥ್‍ಗೆ ಮದುವೆಯಾಗಿಲ್ಲ. ಬಸಯ್ಯನ ಪತ್ನಿಗೆ ಕಳೆದೊಂದು ವರ್ಷದಿಂದ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಆದ್ದರಿಂದ ಅಪ್ಪ-ಮಗನೇ ಅಡುಗೆ ಮಾಡಿಕೊಂಡು ಊಟ ಮಾಡುತ್ತಿದ್ದರು. ಗುರುವಾರ ಸಂಜೆ ಇಬ್ಬರು ಕೂಲಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದಾರೆ.
ಬಸಯ್ಯ ಅಡುಗೆ ಮಾಡುವ ಒಲೆ ಪಕ್ಕದಲ್ಲಿ ಮಲಗಿದ್ದರು. ತಡವಾಗಿ ಮನೆಗೆ ಬಂದ ಮಗ ಅಪ್ಪನನ್ನ ಅಡುಗೆ ಮಾಡಬೇಕು ಎದ್ದೇಳು ಎಂದು ಹೇಳಿದ್ದಾನೆ. ಆದರೆ ಅಪ್ಪ ಬಸಯ್ಯ ಎದ್ದೇಳಿಲ್ಲ. ಕೂಡಲೇ ಕುಡಿದ ಅಮಲಿನಲ್ಲಿದ್ದ ಮಗ ಒಲೆಯಲ್ಲಿ ಉರಿಯುತ್ತಿದ್ದ ಸೌದೆಯಲ್ಲಿ ಅಪ್ಪನ ಮೇಲೆ ಹಲ್ಲೆ ಮಾಡಿದ್ದಾನೆ. ಆಗ ಅಪ್ಪ ಎದ್ದು ಹೋಗಿದ್ದಾರೆ. ಆದರೆ ರಾತ್ರಿ ಬಸಯ್ಯಗೆ ಏನು ಆಗಿರಲ್ಲ, ಚೆನ್ನಾಗಿದ್ದರು. ಬಳಿಕ ಮಗನೇ ಅಡುಗೆ ಮಾಡಿ ಅಪ್ಪನಿಗೆ ಊಟ ಹಾಕಿ ಮಲಗಿಸಿದ್ದಾನೆ.
ಶುಕ್ರವಾರ ಬೆಳಗ್ಗೆ ಎದ್ದು ನೋಡಿದಾಗ ಅಪ್ಪ ಬಸಯ್ಯನ ತಲೆಯಲ್ಲಿ ರಕ್ತಸ್ರಾವವಾಗಿ ಸಾವನ್ನಪ್ಪಿದ್ದ. ಬಳಿಕ ಮಗನೇ ನಡೆದ ಘಟನೆಯ ಬಗ್ಗೆ ಗ್ರಾಮದ ಜನರಿಗೆ ತಿಳಿಸಿದ್ದಾನೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬಂದು ಆರೋಪಿ ಮಂಜುನಾಥ್‍ನನ್ನ ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.