– ಅಪಾಯದಿಂದ ಪಾರಾದ ಮೂರು ಮಕ್ಕಳು
ಜೈಪುರ: ಒಲೆಯಲ್ಲಿನ ಕಿಡಿಗೆ ಗುಡಿಸಲು ಸುಟ್ಟು ಕರಕಲಾಗಿ ಎರಡು ವರ್ಷದ ಮಗು ಸಾವನ್ನಪ್ಪಿದೆ. ಶನಿವಾರ ಮಧ್ಯಾಹ್ನ ರಾಜಸ್ಥಾನದ ಸಿಕಾರ ಜಿಲ್ಲೆಯ ತಾರಾನಗರ ಬಳಿಯ ಬೂಚ್ವಾಸ್ ನಲ್ಲಿ ನಡೆದಿದೆ.
ಎರಡು ವರ್ಷದ ಸೂರಜ್ ಬೆಂಕಿಗಾಹುತಿಯಾದ ಕಂದಮ್ಮ. ಸೂರಜ್ ತಂದೆ ಪಿತರಾಮ್ ಪತ್ನಿಯನ್ನ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ನಾಲ್ವರು ಮಕ್ಕಳಲ್ಲಿ ಮೂವರು ಹೊರಗೆ ಆಟ ಆಡುತ್ತಿದ್ದರು. ಒಲೆಯಲ್ಲಿದ್ದ ಕಿಡಿ ಗಾಳಿಗೆ ಹಾರಿ ಇಡೀ ಗುಡಿಸಲು ಆವರಿಸಿದ ಪರಿಣಾಮ ಒಳಗಡೆ ಇದ್ದ ಸೂರಜ್ ಮೃತಪಟ್ಟಿದ್ದಾನೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು ದೌಡಾಯಿಸಿದ್ದಾರೆ. ಬೆಂಕಿ ನಂದಿಸಲು ಪ್ರಯತ್ನಿಸುವ ವೇಳಗೆ ಇಡೀ ಗುಡಿಸಲನ್ನ ಅಗ್ನಿ ಆಹುತಿ ತೆಗೆದುಕೊಂಡಿತ್ತು. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಕುಟುಂಬಸ್ಥರಿಂದ ಮಾಹಿತಿ ಕಲೆ ಹಾಕಿದ್ದಾರೆ. ಸುಟ್ಟು ಕರಕಲಾಗಿದ್ದ ಮಗುವಿನ ಮೃತದೇಹವನ್ನ ಮರಣೋತ್ತರ ಶವ ಪರೀಕ್ಷೆ ನಡೆಸಿ ಕುಟುಂಬಕ್ಕೆ ಹಸ್ತಾಂತರಿಸಿದ್ದಾರೆ. ಇನ್ನು ಇಡೀ ಕುಟುಂಬ ಬೀದಿ ಬಂದಿದ್ದನು ಕಂಡ ಸ್ಥಳೀಯರು ಆರ್ಥಿಕ ಸಹಾಯ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.