ಬೆಂಗಳೂರು: ರಾಸಲೀಲೆ ಪ್ರಕರಣದಲ್ಲಿ ಒಬ್ಬರಿಗೆ ಕ್ಲೀನ್‍ಚಿಟ್ ನೀಡುವ ಉದ್ದೇಶದಿಂದ ತನಿಖೆಯನ್ನ ಸರ್ಕಾರ ಎಸ್‍ಐಟಿಗೆ ನೀಡಿದೆ ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.
ಎಫ್‍ಐಆರ್ ಇಲ್ಲದೇ ಎಸ್‍ಐಟಿ ತನಿಖೆ ನಡೆಸುತ್ತಿದೆ. ರಾಸಲೀಲೆ ಪ್ರಕರಣವನ್ನ ಮುಚ್ಚಿ ಹಾಕೋಕೆ ಪ್ರಯತ್ನಿಸ್ತಿರೋದು ಮೇಲ್ನೋಟಕ್ಕೆ ಕಾಣಿಸುತ್ತಿದೆ. ಎಸ್‍ಐಟಿ ತನಿಖೆಯಿಂದ ಏನು ಆಗಲಾರದು. ಇದೊಂದು ಕಣ್ಣೊರೆಸುವ ತಂತ್ರವಾಗಿದ್ದು, ಒಬ್ಬರಿಗೆ ಕ್ಲೀನ್‍ಚಿಟ್ ಕೊಡಬೇಕಿದೆ. ಆ ಕ್ಲೀನ್‍ಚಿಟ್ ನೀಡುವದಕ್ಕಾಗಿ ಸರ್ಕಾರ ಸಮಿತಿಯನ್ನ ರಚಿಸಿದೆ ಎಂದು ಡಿ.ಕೆ.ಸುರೇಶ್ ಹೇಳಿದರು.
ಪ್ರಕರಣ ಮುಚ್ಚಿ ಹಾಕಲು ಸರ್ಕಾರ ಸಮಿತಿಯನ್ನ ನೇಮಕ ಮಾಡಿದಂತಿದೆ. ಸಿಡಿ ಮಾಡಿದ್ದು ಯಾರು? ಮಾಜಿ ಸಚಿವರು ಹೇಗೆ ಈ ಪ್ರಕರಣದಲ್ಲಿ ಸಿಲುಕಿದ್ರು? ಎಲ್ಲಿ ಆಯ್ತು? ಸಿಡಿ ಹಿಂದಿರುವ ವ್ಯಕ್ತಿಗಳು ಯಾರು ಅನ್ನೋದು ತನಿಖೆ ಆಗಬೇಕಾದ್ರೆ ಒಂದು ಎಫ್‍ಐಆರ್ ದಾಖಲಾಗಬೇಕು. ಆದ್ರೆ ತನಿಖೆ ಆರಂಭಗೊಂಡಿದ್ದರೂ ಎಫ್‍ಐಆರ್ ಏಕೆ ದಾಖಲಾಗಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಪ್ರಶ್ನೆ ಮಾಡಿದ್ದಾರೆ.
ಗುರುವಾರ ಮಾಧ್ಯಮಗಳ ಜೊತೆ ಮಾತನಾಡಿದ್ದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಎಸ್‍ಐಟಿ ತನಿಖೆ ತಿಪ್ಪೆ ಸಾರಿಸುವ ಕೆಲಸ ಅಷ್ಟೇ. ಇದರಿಂದ ಯಾವುದೇ ಪ್ರಯೋಜನವಿಲ್ಲ. ತನಿಖಾ ವರದಿಯಲ್ಲಿ ಯಾರು ಇದುವರೆಗೂ ಜೈಲಿಗೆ ಹೋಗಿಲ್ಲ. ರಾಜಕಾರಣದಲ್ಲಿ ನೇರವಾಗಿ ಯುದ್ಧ ಮಾಡೋಣ. ಪ್ರತಿ ದಿನ ಜನರ ಮುಂದೆ ಬರುವವರು, ಜನರಿಗೆ ಏನು ಸಂದೇಶ ಕೊಡುತ್ತೀರಾ ಎಂದು ಸರ್ಕಾರವನ್ನ ಪ್ರಶ್ನಿಸಿದ್ದರು.