– ಸಿನಿಮಾ ಮಂದಿರಕ್ಕೆ ಬರುತ್ತಿಲ್ಲ ಜನ
– ಖಾಸಗಿ ಹೋಟೆಲ್‌ನಲ್ಲಿ ನಿರ್ಮಾಪಕರ ಸಭೆ
ಬೆಂಗಳೂರು: ಕೋವಿಡ್ 19 ಬಂದ ನಂತರ ಚಿತ್ರೋದ್ಯಮಕ್ಕೆ ಬಲವಾದ ಪೆಟ್ಟು ಬಿದ್ದಿದೆ. ನಿಧಾನವಾಗಿ ಸ್ಥಗಿತಗೊಂಡಿದ್ದ ಆರ್ಥಿಕ ಚಟುವಟಿಕೆಗಳು ಆರಂಭಗೊಂಡಿದ್ದರೂ ಚಲನ ಚಿತ್ರ ಮಂದಿರಕ್ಕೆ ಜನ ಬರುತ್ತಿಲ್ಲ. ಈ ನಿಟ್ಟಿನಲ್ಲಿ ಮುಂದೆ ಚಿತ್ರಗಳನ್ನು ಮಂದಿರಗಳಲ್ಲಿ ರಿಲೀಸ್ ಮಾಡಬೇಕೇ? ಬೇಡವೇ ಎಂಬುದರ ಬಗ್ಗೆ ಚರ್ಚೆ ನಡೆಸಲು ಸ್ಯಾಂಡಲ್‌ವುಡ್ ಚಿತ್ರ ನಿರ್ಮಾಪಕರು ಇಂದು ಸಭೆ ನಡೆಸಿದ್ದಾರೆ.
ಕೊರೊನಾದಿಂದಾಗಿ ಬಿಡುಗಡೆಯಾಗಬೇಕಿದ್ದ ಬಿಗ್ ಬಜೆಟ್ ಸಿನಿಮಾಗಳು ಈ ವರ್ಷಕ್ಕೆ ಮುಂದೂಡಿಕೆಯಾಗಿವೆ. ಈ ನಡುವೆ ಸಿನಿಮಾ ಮಂದಿರಗಳಲ್ಲಿ ಶೇ.50 ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ಕೋವಿಡ್ 19 ನಿಂದಾಗಿ ಜನ ಸಿನಿಮಾ ಮಂದಿರದತ್ತ ಬರುವುದು ಕಡಿಮೆಯಾಗಿದೆ. ಈಗ ಶೇ.50 ರಷ್ಟು ಪ್ರೇಕ್ಷಕರಿಗೆ ಮಾತ್ರ ಅವಕಾಶ ನೀಡಿದ್ದು ನಿರ್ಮಾಪಕರಿಗೆ ಸಂಕಷ್ಟ ತಂದಿದೆ. ಈ ಕಾರಣಕ್ಕೆ ಮುಂದೆ ಸಿನಿಮಾವನ್ನು ಹೇಗೆ ಬಿಡುಗಡೆ ಮಾಡಬೇಕು? ಒಟಿಟಿಯಲ್ಲಿ ಬಿಡುಗಡೆ ಮಾಡಿದರೆ ಹೇಗೆ? ಈ ಎಲ್ಲ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಬಿಗ್ ಬಜೆಟ್ ಸಿನಿಮಾ ನಿರ್ಮಾಪಕರು ಸಭೆಯಲ್ಲಿ ಚರ್ಚೆ ನಡೆಸಿದ್ದಾರೆ.
ತಮಿಳುನಾಡು ಸರ್ಕಾರ ನಟ ವಿಜಯ್ ಮನವಿಗೆ ಸಿನಿಮಾಗಳಲ್ಲಿ ಫುಲ್ ಹೌಸ್ ಆಸನ ಭರ್ತಿಗೆ ಅವಕಾಶ ನೀಡಿತ್ತು. ಜ.14ರಿಂದ ಎಲ್ಲ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡವುದಾಗಿ ತಮಿಳುನಾಡು ಸರ್ಕಾರ ಹೇಳಿತ್ತು. ಆದರೆ ಇಂದು ಕೇಂದ್ರ ಗೃಹ ಇಲಾಖೆ ಯಾವುದೇ ಕಾರಣಕ್ಕೂ ಕೋವಿಡ್ 19 ಮಾರ್ಗಸೂಚಿಯನ್ನು ಬದಲಾಯಿಸಬಾರದು. ಶೇ.50ರಷ್ಟು ಆಸನ ಭರ್ತಿಗೆ ಮಾತ್ರ ಅವಕಾಶ ನೀಡಬೇಕು. ಕೂಡಲೇ ಈ ಹಿಂದೆ ಹೊರಡಿಸಲಾದ ಆದೇಶವನ್ನು ಬದಲಾಯಿಸಬೇಕು ಎಂದು ಸೂಚಿಸಿದೆ.
ಕೇಂದ್ರ ಸರ್ಕಾರ ತಮಿಳುನಾಡು ಸರ್ಕಾರಕ್ಕೆ ಸೂಚಿಸದೇ ಇದ್ದಲ್ಲಿ ಕರ್ನಾಟಕದಲ್ಲೂ ಫುಲ್ ಹೌಸ್ ಪ್ರದರ್ಶನಕ್ಕೆ ಅನುಮತಿ ನೀಡುವಂತೆ ನಿರ್ಮಾಪಕರ ಸಂಘ ಒತ್ತಾಯ ಮಾಡುತ್ತಿತ್ತು. ಆದರೆ ಈಗ ಕೇಂದ್ರ ಸರ್ಕಾರ ಈ ಹಿಂದಿನ ಕೋವಿಡ್ 19 ಮಾರ್ಗಸೂಚಿಯಲ್ಲೇ ಸಿನಿಮಾ ಮಂದಿರಗಳ ತೆರೆಯಬೇಕು ಎಂದು ಸೂಚಿಸಿದ ಹಿನ್ನೆಲೆಯಲ್ಲಿ ನಿರ್ಮಾಪಕರು ಮುಂದೆ ಸಿನಿಮಾಗಳನ್ನು ಯಾವ ರೀತಿ ಬಿಡುಗಡೆ ಮಾಡಬೇಕು ಎಂಬುದರ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಸಭೆಯಲ್ಲಿ ಕೆಜಿಎಫ್, ಯುವರತ್ನ ನಿರ್ಮಾಪಕ ವಿಜಯ್ ಕಿರಗಂದೂರು, ವಿತರಕ ಕಾರ್ತಿಕ್ ಗೌಡ, ಕೋಟಿಗೊಬ್ಬ 3 ನಿರ್ಮಾಪಕ ಸೂರಪ್ಪ ಬಾಬು, ರಾಬರ್ಟ್ ನಿರ್ಮಾಪಕ ಉಮಾಪತಿ , ಸಲಗ ನಿರ್ಮಾಪಕ ಕೆಪಿ ಶ್ರೀಕಾಂತ್ ಸೇರಿದಂತೆ ಹತ್ತಕ್ಕೂ ಹೆಚ್ಚು ನಿರ್ಮಾಪಕರು ಭಾಗವಹಿಸಿದ್ದರು.
ಏನು ಚರ್ಚೆಯಾಗಿದೆ?
ಒಂದು ಕಡೆ ಕೊರೊನಾ ಎರಡನೇ ಅಲೆಯ ಆತಂಕ ಇನ್ನೊಂದು ಕಡೆ ಬ್ರಿಟನ್ ಸೋಂಕು ಮತ್ತೊಂದು ಕಡೆ ವಿದೇಶಗಳಲ್ಲಿ ಲಾಕ್‌ಡೌನ್ ಜಾರಿ ಪರಿಸ್ಥಿತಿ ಹೀಗಿರುವಾಗ ಶೇ.100 ರಷ್ಟು ಆಸನ ಭರ್ತಿಗೆ ಅವಕಾಶ ಬಹಳ ಕಡಿಮೆ. ಶೀಘ್ರವೇ ಭಾರತದಲ್ಲಿ ಪರಿಸ್ಥಿತಿ ಬದಲಾಗುತ್ತದೆ ಎಂದು ಹೇಳಲು ಬರುವುದಿಲ್ಲ. ದಿನ ಹೋಗುತ್ತಿದ್ದಂತೆ ಬಿಡುಗಡೆಯಾಗಬೇಕಿರುವ ಸಿನಿಮಾಗಳ ಸಂಖ್ಯೆಗಳ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ ಎಲ್ಲ ಸಿನಿಮಾಗಳಿಗೆ ಥಿಯೇಟರ್‌ನಲ್ಲಿ ಅವಕಾಶ ಸಿಗುತ್ತದೆ ಎಂದು ಹೇಳಲು ಆಗುವುದಿಲ್ಲ. ಸಿನಿಮಾ ರಿಲೀಸ್ ಆದರೂ ಜನ ಮೊದಲಿನಂತೆ ಬರುತ್ತಾರೆ ಎಂದು ಊಹಿಸುವುದು ಕಷ್ಟ. ಹೀಗಾಗಿ ಒಟಿಟಿಯಲ್ಲಿ ರಿಲೀಸ್ ಮಾಡಿದರೆ ಹೇಗೆ? ಒಟಿಟಿಯಲ್ಲಿ ರಿಲೀಸ್ ಮಾಡಿದರೆ ಸಿನಿಮಾಗೆ ಹೂಡಿದ ಬಂಡವಾಳ ಬರುತ್ತಾ? ನಮ್ಮನ್ನೇ ನಂಬಿಕೊಂಡಿರುವ ಸಿನಿಮಾ ಮಂದಿರಗಳ ಮಾಲೀಕರ ಕಷ್ಟ ಏನು? ಸಿನಿಮಾ ರಿಲೀಸ್ ಮಾಡಿದರೆ ಥಿಯೇಟರ್‌ಗಳ ಬಾಡಿಗೆ ಲೆಕ್ಕಾಚಾರ ಎಷ್ಟು ನೀಡಬೇಕು? ನಷ್ಟವಾದರೆ ಭರ್ತಿ ಹೇಗೆ ಮಾಡಬೇಕು? ಕಲಾವಿದರ ಪಾಡು ಏನು? ಹೊಸ ಸಿನಿಮಾಗಳಿಗೆ ಆಗಿರುವ ಸಂಕಷ್ಟ ಏನು? ಈ ಎಲ್ಲ ಪ್ರಶ್ನೆಗಳನ್ನು ಇಟ್ಟುಕೊಂಡು ಚರ್ಚೆ ಮಾಡಿದ್ದಾರೆ.
ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಿದ್ದರೂ ಅಂತಿಮವಾಗಿ ಯಾವುದೇ ತೀರ್ಮಾನಕ್ಕೆ ಬಂದಿಲ್ಲ. ಮುಂದಿನ ಎರಡು ಮೂರು ದಿನದಲ್ಲಿ ನಿರ್ಮಾಪಕರು ಸಿನಿಮಾ ಬಿಡುಗಡೆ ಸಂಬಂಧ ಅಂತಿಮ ನಿರ್ಧಾರನ್ನು ಪ್ರಕಟಿಸುವ ಸಾಧ್ಯತೆಯಿದೆ.