ಒಂದೇ ವಿಡಿಯೋ – 20 ಕ್ಯಾಮೆರಾಮ್ಯಾನ್‍ಗಳಿಗೆ ಕೆಲಸ ಕೊಟ್ಟ ಸೃಜನ್

Public TV
2 Min Read
SRUJAN

– ಬನ್ನಿ ಮತ್ತೆ ದುಡಿಯೋಣ ನಮ್ಮ ದೇಶ ಮತ್ತೆ ಕಟ್ಟೋಣ

ಬೆಂಗಳೂರು: ಲಾಕ್‍ಡೌನ್‍ನಿಂದ ಚಿತ್ರರಂಗದ ಕೆಲಸಗಳು ಸ್ಥಗಿತವಾಗಿವೆ. ಇದರಿಂದ ಕಲಾವಿದರು, ಕ್ಯಾಮೆರಾಮ್ಯಾನ್‍ಗಳು ಸೇರಿದಂತೆ ಅನೇಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಆತ್ಮನಿರ್ಭರ್ ಭಾರತಕ್ಕೆ ಕೈ ಜೋಡಿಸುವ ಮೂಲಕ ಕಲಾವಿದರಿಗೆ ಸಹಾಯ ಮಾಡಿದ್ದಾರೆ.

ನಟ ಸೃಜನ್ ಲೋಕೇಶ್ ಚಿತ್ರರಂಗದ ಕೆಲಸಗಳು ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಮನೆಯಲ್ಲಿ ಕ್ರಿಯೇಟಿವ್ ವಿಡಿಯೋ ತಯಾರಿಸಿದ್ದಾರೆ. 20 ಕ್ಯಾಮೆರಾಮ್ಯಾನ್‍ಗಳನ್ನು ಬಳಸಿ ಈ ವಿಡಿಯೋ ತಯಾರಿಸಿದ್ದು, ಕ್ಯಾಮೆರಾ ವಿಭಾಗದವರಿಗೆ ಕೆಲಸ ಸೃಷ್ಟಿಸಬೇಕೆಂಬ ಉದ್ದೇಶದಿಂದ ಈ ರೀತಿ ವಿಡಿಯೋವನ್ನು ತಯಾರಿಸಿದ್ದಾರೆ. 20 ಶಾಟ್‍ಗಳ ಮೂಲಕ ಸೃಜನ್ ಮಹತ್ವದ ಸಂದೇಶ ರವಾನಿಸಿದ್ದಾರೆ. ಇದಕ್ಕಾಗಿ ನಟ ಸೃಜನ್ ಲೋಕೇಶ್ ಅವರಿಗೆ ಸಂಭಾವನೆ ಕೂಡ ನೀಡಿದ್ದಾರೆ.

Lockdown 2 1

ಸೃಜನ್ ಲೋಕೇಶ್ ಇನ್‍ಸ್ಟಾಗ್ರಾಮ್, ಫೇಸ್‍ಬುಕ್‍ನಲ್ಲಿ ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಆ ವಿಡಿಯೋಗೆ “ಬನ್ನಿ ಮತ್ತೆ ದುಡಿಯೋಣ ನಮ್ಮ ದೇಶವನ್ನ ಮತ್ತೆ ಕಟ್ಟೋಣ” ಎಂಬ ಶೀರ್ಷಿಕೆ ಕೊಟ್ಟಿದ್ದಾರೆ. ಜೊತೆ #beindianbuyindian ಎಂಬ ಹ್ಯಾಶ್ ಟ್ಯಾಗ್ ಹಾಕಿದ್ದಾರೆ.

“ಎಲ್ಲರಿಗೂ ನಮಸ್ಕಾರ ಅಂದಿನಿಂದ ಇಂದಿನವರೆಗೆ ಎಂತಹ ಯುದ್ಧನೇ ಆಗಿರಲಿ, ಎಂತಹ ಸಂಕಷ್ಟನೇ ಆಗಿರಲಿ. ಈಗಿನ ಮಹಾಮಾರಿ ಕೊರೊನಾವೇ ಆಗಿರಲಿ ಸಮಸ್ಯೆಗೆ ಹೆದರಿ ಮುಂದಿಟ್ಟಿದ್ದ ಹೆಜ್ಜೆಯನ್ನು ಹಿಂದಿಟ್ಟ ಇತಿಹಾಸ ನಮ್ಮ ಭಾರತದಲ್ಲೇ ಇಲ್ಲ. ಆರೋಗ್ಯವೇ ನಮ್ಮ ಭಾಗ್ಯ, ಇಷ್ಟು ದಿನ ದೇಹದ ಆರೋಗ್ಯಕ್ಕಾಗಿ ಹೋರಾಡುದ್ವಿ, ಇನ್ನೂ ಮುಂದೆ ದೇಶದ ಸಂಪತ್ತಿಗೋಸ್ಕರ ಹೋರಾಡೋಣ. ಹೂ, ಹಣ್ಣು, ತರಕಾರಿನೇ ಆಗಿರಲಿ, ದಿನ ಬಳಸುವ ವಸ್ತುಗಳಾಗಿರಲಿ, ಲೋಕಲ್‍ನಿಂದ ಗ್ಲೋಬಲ್‍ವರೆಗೂ ಬೆಳೆಯೋಣ. ‘beindianbuyindian’ ಆತ್ಮನಿರ್ಭರ್ ಭಾರತಕ್ಕೆ ನಾವೆಲ್ಲಾ ಕೈ ಜೋಡಿಸೋಣ” ಎಂದು ಸಂದೇಶ ಸಾರಿದರು.

SRUJAN 1

40 ಸೆಕೆಂಡ್‍ವರೆಗೂ ಮಾತನಾಡುವ ವಿಡಿಯೋದಲ್ಲಿ ಸೃಜನ್ ತುಂಬಾ ಶಾಟ್ ತೆಗೆದುಕೊಂಡಿದ್ದಾರೆ. ಅಲ್ಲದೇ ಯಾಕೆ ಇಷ್ಟೊಂದು ಶಾಟ್ ತೆಗೆದುಕೊಂಡೆ ಎಂಬುದನ್ನು ಅವರೇ ತಿಳಿಸಿದ್ದಾರೆ. ಇಷ್ಟು ಮಾತನ್ನು ಒಂದೇ ಶಾಟಿನಲ್ಲಿ ಹೇಳಬಹುದಿತ್ತು. ಆದ್ರೆ ಇಷ್ಟು ಶಾಟ್ ಕಟ್ ಯಾಕೆಂದು ಥಿಂಕ್ ಮಾಡುತ್ತಿದ್ದೀರ. ಈ ಶಾಟ್ ಕಟ್‍ಗಳ ಹಿಂದೆಯೂ ಒಂದು ಕಥೆಯಿದೆ ಎಂದು ತಿಳಿಸಿದರು.

“ಲಾಕ್‍ಡೌನ್ ಸಂದರ್ಭದಲ್ಲಿ ನಮ್ಮ ಕಲಾವಿದರು, ದಿನಗೂಲಿ ಕಾರ್ಮಿಕರು, ಟೆಕ್ನಿಷಿಯನ್ಸ್ ಸೇರಿದಂತೆ ಅನೇಕರಿಗೆ ತುಂಬಾನೇ ಕಷ್ಟವಾಗಿದೆ. ಇದಕ್ಕೆ ಸ್ಪಂದಿಸಿ ಹಲವಾರು ಜನರು ಸಹಾಯ ಮಾಡಿದ್ದಾರೆ. ಅವರಿಗೆಲ್ಲ ಧನ್ಯವಾದ, ಆದರೆ ನಮ್ಮ ಲೋಕೇಶ್ ಪ್ರೊಡಕ್ಷನ್‍ನಲ್ಲಿ ಕೆಲಸ ಮಾಡುತ್ತಿರುವ ಕ್ಯಾಮೆರಾಮ್ಯಾನ್‍ಗಳು, 10 ವರ್ಷದಿಂದ ನನ್ನ ಜೊತೆ ಕೆಲಸ ಮಾಡುತ್ತಿರುವವರಿಗೆ ಸಹಾಯ ಮಾಡಬೇಕೆಂದುಕೊಂಡೆ.

SRUJAN 2

ಆದ್ರೆ ಅವರು, ನಮಗೆ ಸಹಾಯ ಮಾಡಬೇಕು ಎನಿಸಿದರೆ ದಯವಿಟ್ಟು ಕೆಲಸ ಕೊಡಿ ಎಂದು ಕೇಳಿಕೊಂಡರು. ಈ ವಿಡಿಯೋದಲ್ಲಿರುವ 20 ಶಾಟ್‍ಗಳನ್ನು ನನ್ನ 20 ಜನ ಕ್ಯಾಮೆರಾಮ್ಯಾನ್‍ಗಳು ಕಂಪೋಸ್ ಮಾಡಿ ಅವರ ಸಂಭಾವನೆಯನ್ನ ಅವರೇ ದುಡಿದಿದ್ದಾರೆ. ಈ ಲಾಕ್‍ಡೌನ್ ಸಮಯದಲ್ಲಿ ನನ್ನ ಕೈಯಲ್ಲಿ ಅವರಿಗೆ ಈ ಕೆಲಸ ಕೊಡಲು ಮಾತ್ರ ಸಾಧ್ಯವಾಯಿತು” ಎಂದು ತಿಳಿಸಿದ್ದಾರೆ. ಜೊತೆಗೆ ಪ್ರತಿಯೊಬ್ಬ ಕ್ಯಾಮೆರಾಮ್ಯಾನ್‍ ಹೆಸರುಗಳನ್ನು ವಿಡಿಯೋ ನಮೂದಿಸಿದ್ದಾರೆ.

ಈ ಜೀವನ ಭಗವಂತ ಹೇಳಿದ ಆ್ಯಕ್ಷನ್‍ನಿಂದ ಶುರುವಾಗುತ್ತೆ, ಅವನು ಹೇಳಿದ ಕಟ್‍ನಿಂದ ಮುಕ್ತಾಯವಾಗುತ್ತೆ. ಈ ಆ್ಯಕ್ಷನ್-ಕಟ್ ಮಧ್ಯದ ಜೀವನದಲ್ಲಿ ನಾವು ಸಾಧ್ಯವಾದಷ್ಟು ಬೇರೆಯವರಿಗೆ ಸಹಾಯ ಮಾಡೋಣ. ಬನ್ನಿ ಮತ್ತೆ ನಾವೆಲ್ಲರೂ ಸೇರಿ ದುಡಿಯೋಣ, ನಮ್ಮ ದೇಶವನ್ನು ಮತ್ತೆ ಕಟ್ಟೋಣ ಎಂಬ ಸಂದೇಶವನ್ನು ಸಾರಿದ್ದಾರೆ.

https://www.facebook.com/srujanlokesh/videos/vb.490600890982778/1165816490464005/?type=2&theater

Share This Article
Leave a Comment

Leave a Reply

Your email address will not be published. Required fields are marked *