ಕನ್ನಡ ಜನತೆ ಕಂಡ ಹೆಸರಾಂತ ಮಿಮಿಕ್ರಿ ಆರ್ಟಿಸ್ಟ್ ಹಾಗೂ ನಟ ಮಿಮಿಕ್ರಿ ದಯಾನಂದ್ ನಮ್ಮೊಂದಿದೆ ಅವರ ಜೀವನದ ಒಂದಿಷ್ಟು ಘಟನೆಗಳನ್ನು ಹಂಚಿಕೊಂಡಿದ್ದಾರೆ.
ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ, ಕಲಾವಿದನಾಗಿ ನೀವು ಚಿರಪರಿಚಿತರು ಒಮ್ಮೆ ನಿಮ್ಮ ಬಾಲ್ಯದ ದಿನಗಳನ್ನು ನೆನೆಯುವಿರಾ?
ನಾನು ಹುಟ್ಟಿ ಬೆಳೆದಿದ್ದು ಮೈಸೂರಿನಲ್ಲಿ. ನನ್ನ ತಂದೆ ತಾಯಿ ಇಬ್ಬರು ವೃತ್ತಿಯಲ್ಲಿ ವೈದ್ಯರು. ಚಿಕ್ಕಂದಿನಿಂದಲೂ ಓದಿಗಿಂತಲೂ ನನಗೆ ಕಲೆಯಲ್ಲಿ ಬಹಳ ಆಸಕ್ತಿ ಇತ್ತು. ಪ್ರಾಥಮಿಕ ಹಂತದಲ್ಲಿ ಓದುತ್ತಿದ್ದಾಗಲೇ ನಾನು ಬೇರೆಯವರ ಅನುಕರಣೆ (ಮಿಮಿಕ್ರಿ) ಮಾಡಿ ಮಾತನಾಡಿ ನಗಿಸುತ್ತಿದೆ. ಮನೆಯ ಹತ್ತಿರ ಯಾವುದೇ ಕಾರ್ಯಕ್ರಮವಿದ್ರೂ ಸ್ಟೇಜ್ ಖಾಲಿ ಇದ್ರೆ ಓಡಿ ಹೋಗಿ ಮೈಕ್ ಹಿಡಿದು ಮಿಮಿಕ್ರಿ ಮಾಡುತ್ತಿದ್ದೆ. ಆಗ ನನ್ನನ್ನು ನೋಡಿ ಎಲ್ಲರೂ ಖುಷಿ ಪಡುತ್ತಿದ್ರು. ವಿಶೇಷವಾಗಿ ಗಣೇಶ ಹಬ್ಬದ ಸಂದರ್ಭದಲ್ಲಿ ಮನೋರಂಜನಾ ಕಾರ್ಯಕ್ರಮಗಳು ಇರುತ್ತಿತ್ತು ಕಾರ್ಯಕ್ರಮ ಆರಂಭಕ್ಕೂ ಮುನ್ನ ನಾನು ಸ್ಟೇಜ್ ಮೇಲೆ ಹತ್ತಿ ಮೈಸೂರಿನಲ್ಲಿ ಟಾಂಗ ಓಡಿಸುವವರು, ಹಾವಾಡಿಗರ ಮಿಮಿಕ್ರಿ ಮಾಡುತ್ತಿದ್ದೆ, ಜೋಕ್ ಮಾಡುತ್ತಿದ್ದೆ. ಇದನ್ನು ನೋಡಿ ನನಗೆ ಹಣ್ಣು, ಚಾಕೋಲೇಟ್ ನೀಡುತ್ತಿದ್ರು, ಆಗಿನ್ನು ನನಗೆ ಆರರಿಂದ ಏಳು ವರ್ಷ ವಯಸ್ಸು. ಹೀಗೆ ಅವಕಾಶ ಸಿಕ್ಕಾಗೆಲ್ಲ ಮಿಮಿಕ್ರಿ ಮಾಡುತ್ತಾ ಇದ್ದೆ. ಈ ರೀತಿ ನನ್ನ ಬಾಲ್ಯದ ದಿನಗಳಲ್ಲೇ ಓದಿನ ಜೊತೆ ಮಿಮಿಕ್ರಿ ಕೂಡ ಹವ್ಯಾಸವಾಗಿ ಬೆಳೆಯುತ್ತಾ ಹೋಯಿತು. ಇದನ್ನೂ ಓದಿ: ನನ್ನ ಹೆಸರಲ್ಲೇ ಹೀರೋ, ವಿಲನ್ ಇಬ್ಬರೂ ಇದ್ದಾರೆ: ಖ್ಯಾತ ಖಳನಟ ಮುನಿರಾಜು
Advertisement
Advertisement
ಕೈಯಲ್ಲಿ ಸರ್ಕಾರಿ ಉದ್ಯೋಗವಿದ್ರು ನಾಟಕ, ಮಿಮಿಕ್ರಿ ಕಡೆಗಿನ ಆಸಕ್ತಿ ಮಾಸಲಿಲ್ಲ.
ನಾನು ಬೆಳೆಯುತ್ತಾ ಮಿಮಿಕ್ರಿಯಲ್ಲಿ ಬಹಳ ಆಸಕ್ತಿ ಮೂಡಿತು. ನಟರನ್ನು, ರಾಜಕಾರಣಿಗಳನ್ನು, ಸಾಮಾನ್ಯ ಜನರನ್ನು ಹೀಗೆ ಎಲ್ಲರನ್ನು ನಾನು ಅನುಕರಣೆ ಮಾಡಿ ಮಿಮಿಕ್ರಿ ಮಾಡುತ್ತಿದ್ದೆ, ಅವಕಾಶ ಸಿಕ್ಕಾಗ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿದ್ದೆ. ಪಿಯುಸಿ ಮುಗಿದ ನಂತರ ಕಾವೇರಿ ಎಂಪೋರಿಯಂನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಆರಂಭದಲ್ಲಿ ನನ್ನನ್ನು ಉತ್ತರ ಕರ್ನಾಟಕದ ಕೊಪ್ಪಳಕ್ಕೆ ಕಳಿಸಹಿಸಿದ್ರು. ಕೆಲಸ ಮಾಡುತ್ತಲೇ ಪದವಿ ಮುಗಿಸಿದೆ. ಇದರ ಜೊತೆ ಸಂಜೆ ಸಮಯದಲ್ಲಿ ಕಂಪನಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ. ಮಿಮಿಕ್ರಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದೆ. 1980ರಲ್ಲಿ ನನಗೆ ಕೊಪ್ಪಳದಿಂದ ಬೆಂಗಳೂರಿಗೆ ವರ್ಗಾವಣೆಯಾಯಿತು. ಇಲ್ಲಿ ಬಂದ ಮೇಲೆ ಬೀದಿ ನಾಟಕಗಳಲ್ಲಿ ಭಾಗವಹಿಸುತ್ತಿದ್ದೆ. ಆದ್ರೆ ಕೆಲಸದ ಜೊತೆ ನಾಟಕಗಳಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ. ಆಗ ನಾಟಕ ಮಾಡೋದನ್ನು ಬಿಟ್ಟು ಮಿಮಿಕ್ರಿಗೆ ಹೆಚ್ಚು ಪ್ರಾಶಸ್ತ್ಯ ನೀಡಲು ಆರಂಭಿಸಿದೆ. ವೃತ್ತಿಯನ್ನು ನಿರ್ವಹಿಸುತ್ತಾ ಮಿಮಿಕ್ರಿ ಆರ್ಟಿಸ್ಟ್ ಆಗಿಯೂ ಬೆಳೆದೆ.
Advertisement
ದಿಗ್ಗಜ ನಟರೊಂದಿಗೆ ಬೆಳ್ಳಿತೆರೆ ಮೇಲೆ ಕೂಡ ಮಿಂಚಿದ್ದೀರಿ ನೀವು?
ಮಿಮಿಕ್ರಿ ಕಾರ್ಯಕ್ರಮಗಳನ್ನು ಮಾಡುತ್ತಾ ಮಾಡುತ್ತಾ ಒಂದಿಷ್ಟು ಹೆಸರು ಬಂತು ಸಿನಿಮಾದಲ್ಲಿಯೂ ಅವಕಾಶ ಸಿಗಲು ಆರಂಭವಾಯಿತು. ಡಾ.ರಾಜ್ ಕುಮಾರ್, ಅಂಬರೀಶ್, ವಿಷ್ಣುವರ್ಧನ್, ಶಂಕರ್ ನಾಗ್ ಹೀಗೆ ಚಿತ್ರರಂಗದ ಹಲವು ದಿಗ್ಗಜರ ಜೊತೆ ನಟಿಸುತ್ತಾ ಸುಮಾರು ಮುನ್ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬೇರೆ ಬೇರೆ ಪಾತ್ರಗಳಲ್ಲಿ ಹಿರಿಯ ಕಲಾವಿದರ ಜೊತೆ ಬಣ್ಣಹಚ್ಚಿದ್ದೇನೆ.
Advertisement
ಸಿನಿಮಾದಲ್ಲಿ ಕೈತುಂಬ ಅವಕಾಶಗಳಿದ್ರೂ ಸಿನಿಮಾ ಬಿಟ್ಟು ಮಿಮಿಕ್ರಿ ಕಾರ್ಯಕ್ರಮಗಳಿಗೆ ಮರಳಿದ್ದು ಯಾಕೆ?
ಸಿನಿಮಾದಲ್ಲಿ ಸ್ಟಾರ್ ನಟರ ಜೊತೆ ನಟಿಸಲು ಅವಕಾಶ ಸಿಕ್ಕರೂ ಕೂಡ ಒಂದಷ್ಟು ಸಿನಿಮಾದಲ್ಲಿ ನಟಿಸಿದ ನಂತರ ಮಿಮಿಕ್ರಿಯಲ್ಲೇ ನನ್ನನ್ನು ಗುರುತಿಸಿಕೊಳ್ಳುವ ಮನಸ್ಸಾಯಿತು. ಆಗ ಸಿನಿಮಾದಲ್ಲಿ ನಟಿಸೋದು ಬಿಟ್ಟು ಸ್ಟ್ಯಾಂಡ್ ಅಪ್ ಕಾಮಿಡಿಯನ್ ಆಗಿ ಮಿಮಿಕ್ರಿ ಶೋಗಳನ್ನು ಮಾಡಲು ಆರಂಭಿಸಿದೆ. ಹೆಸರಾಂತ ಆರ್ಕೆಸ್ಟ್ರಾಗಳಲ್ಲಿ ನನ್ನ ಮಿಮಿಕ್ರಿ ಶೋ ಕಡ್ಡಾಯವಾಗಿ ಇರುತ್ತಿತ್ತು. ಇದರಲ್ಲಿ ಖ್ಯಾತಿ ಬಂದ ನಂತರ ಒಂದೇ ದಿನದಲ್ಲಿ ಆರರಿಂದ ಏಳು ಮಿಮಿಕ್ರಿ ಶೋಗಳನ್ನು ಇರುತ್ತಿದ್ವು, ಆಗ ನಾನು ನನ್ನ ಸರ್ಕಾರಿ ವೃತ್ತಿಗೂ ರಾಜೀನಾಮೆ ನೀಡಿ ಪೂರ್ಣ ಪ್ರಮಾಣದಲ್ಲಿ ಮಿಮಿಕ್ರಿಯಲ್ಲಿ ಬ್ಯುಸಿಯಾದೆ. ಇದನ್ನೂ ಓದಿ: ಶಿಕ್ಷಕನಾಗಬೇಕೆಂದು ಹೆದರಿ ನಟನಾದೆ: ಕಿರುತೆರೆ ನಟ ಜಹಂಗೀರ್
ಇಲ್ಲಿವರೆಗೆ ಎಷ್ಟು ದೇಶಗಳಲ್ಲಿ ಮಿಮಿಕ್ರಿ ಶೋಗಳನ್ನು ಮಾಡಿದ್ದೀರಾ?
ಮಿಮಿಕ್ರಿ ಆರ್ಟಿಸ್ಟ್ ಆಗಿ ಶೋ ಮಾಡುತ್ತಾ ವಿದೇಶಗಳಲ್ಲೂ ಪ್ರದರ್ಶನ ನೀಡಿದ್ದೇನೆ. ಎಸ್‍ಪಿಬಿ, ಜೇಸುದಾಸ್, ಉಷಾ ಉತ್ತುಪ್ ಸೇರಿದಂತೆ ದೊಡ್ಡ ಸೆಲೆಬ್ರಿಟಿಗಳ ಜೊತೆ ಕಾರ್ಯಕ್ರಮಗಳಲ್ಲಿ ಮಿಮಿಕ್ರಿ ಶೋ ಮಾಡುವ ಅವಕಾಶ ಸಿಕ್ತು. ಇವರ ಜೊತೆ ಪರ್ಫಾರ್ಮ್ ಮಾಡುತ್ತಾ ಅಮೆರಿಕಾದ ಸೌಂಡ್ ಆಫ್ ಮ್ಯೂಸಿಕ್‍ನಿಂದ ಆಫರ್ ಬಂತು. ಮೊದಲ ಬಾರಿ ಕನ್ನಡ ಮಿಮಿಕ್ರಿ ಆರ್ಟಿಸ್ಟ್ ಆಗಿ ಅಮೆರಿಕಾದಲ್ಲಿ ಪರ್ಫಾರ್ಮ್ ಮಾಡಿದ ಹೆಗ್ಗಳಿಕೆ, ಹೆಮ್ಮೆ ನನ್ನದು. ಇದು ನನ್ನ ಜೀವನದ ದೊಡ್ಡ ಮೈಲಿಗಲ್ಲು. ಪಾಕಿಸ್ತಾನ, ರಷ್ಯಾ ಹೊರತು ಪಡಿಸಿ ಎಲ್ಲಾ ದೇಶಗಳಲ್ಲೂ ಶೋ ಮಾಡಿದ್ದೇನೆ. ಇಲ್ಲಿವರೆಗೆ ಒಟ್ಟು 12 ಸಾವಿರಕ್ಕೂ ಅಧಿಕ ಮಿಮಿಕ್ರಿ ಶೋಗಳನ್ನು ಮಾಡಿರೋ ಕೀರ್ತಿ ನನ್ನದು ಅನ್ನೋದಕ್ಕೆ ನಾನು ಸಂತಸ ಪಡುತ್ತೇನೆ.
ಸುಮಾರು 43 ವರ್ಷದ ಪಯಣವದಲ್ಲಿ ನೀವು ಕಂಡುಕೊಂಡ ಸತ್ಯ.
ಪ್ರತಿಭೆ ನಂಬಿ ಬಂದವರಿಗೆ ಇಲ್ಲಿ ಅವಕಾಶ ಇದೆ. ಆದ್ರೆ ನಾವೇ ಹುಡುಕಿ ತೆಗೆದುಕೊಳ್ಳಬೇಕು. ನಮ್ಮ ಗುರಿ ತಲುಪಲು ಹಗಲು ರಾತ್ರಿ ಕಷ್ಟಪಡಬೇಕು. ಸ್ವಂತಿಕೆ ಹಾಗೂ ಹೊಸತನ ಅನ್ನೋದು ತುಂಬಾ ಮುಖ್ಯ. ಏನೇ ಮಾಡಿದ್ರು ಎಲ್ಲೂ ಕದಿಯದೇ ಸ್ವಂತಿಕೆಯಿಂದ, ಹೊಸತನದಿಂದ ಮಾಡಬೇಕು ಆಗ ಅಂದುಕೊಂಡಿದ್ದನ್ನು ಸಾಧಿಸಬಹುದು ಜೊತೆಗೆ ಜನರೂ ಬೆಳೆಸುತ್ತಾರೆ.
ಜೀವನದಲ್ಲಿ ತುಂಬಾ ಕಾಡುವ ಘಟನೆ.
ಹೇಳಲು ಎಷ್ಟೋ ಘಟನೆಗಳಿವೆ ಆದರೂ ಒಂದೇ ದಿನದಲ್ಲಿ ಆದ ಎರಡು ಘಟನೆಗಳ ಬಗ್ಗೆ ಹೇಳಲು ಇಚ್ಚಿಸುತ್ತೇನೆ. ಕನ್ನಡ ರಾಜ್ಯೋತ್ಸವ ದಿನದಂದು ನಾನು ಕಟ್ಟಿದ ಮನೆಯನ್ನು ಸರ್ಕಾರದ ಆದೇಶದ ಮೇರೆಗೆ ಒಡೆದು ಹಾಕಲಾಯಿತು, ಅದೇ ದಿನ ಸಂಜೆ ಮಿಮಿಕ್ರಿ ಶೋ ನಲ್ಲಿ ಸಾವಿರಾರು ಜನರನ್ನು ನಗಿಸುವ ಜವಾಬ್ದಾರಿ ನನಗಿತ್ತು. ನನ್ನ ಜೀವನದಲ್ಲಿ ನಾನು ಸಂಪಾದಿಸಿದ್ದೆಲ್ಲ ಒಂದೇ ದಿನ ಹೊರಟು ಹೋಯಿತು. ಇನ್ನೊಂದು ಕಡೆ ಸಾವಿರಾರು ಜನರನ್ನು ನನ್ನ ನೋವನ್ನು ಮರೆತು ನಗಿಸುವ ಜವಾಬ್ದಾರಿ ನನಗಿತ್ತು. ಈ ಘಟನೆ ನನ್ನನ್ನು ಬಹುವಾಗಿ ಕಾಡುತ್ತೆ.
ವಿದೇಶಗಳಲ್ಲಿ ಒಬ್ಬ ಕನ್ನಡ ಮಿಮಿಕ್ರಿ ಕಲಾವಿದನನ್ನು ಬರಮಾಡಿಕೊಂಡ ಕ್ಷಣಗಳ ಬಗ್ಗೆ ತಿಳಿಸಿ.
ಆರಂಭದ ದಿನಗಳಲ್ಲಿ ನಾನು ವಿದೇಶಕ್ಕೆ ಕಾರ್ಯಕ್ರಮಗಳಿಗೆ ಹೋದಾಗ ಮಿಮಿಕ್ರಿ ಆರ್ಟಿಸ್ಟ್ ಎಂದಾಗ ಅದೇನು ಎನ್ನುವುದೇ ಯಾರಿಗೂ ಗೊತ್ತಿರಲಿಲ್ಲ. ಆದ್ರೆ ಹೋಗ್ತಾ ಹೋಗ್ತಾ ಎಲ್ಲರೂ ನನ್ನನ್ನು ತುಂಬಾ ಪ್ರೀತಿಯಿಂದ ಸ್ವಾಗತಿಸಿದ್ರು, ಪ್ರೋತ್ಸಾಹಿಸಿದ್ರು. ಈಗ ವಿದೇಶಗಳಲ್ಲಿ ತುಂಬಾ ಆತ್ಮೀಯವಾದ ಸಂಬಂಧಗಳು ನನಗಿವೆ, ಫ್ಯಾಮಿಲಿ ಫ್ರೆಂಡ್ಸ್ ಹಾಗೆ ಅವರೆಲ್ಲ ನನ್ನ ಜೊತೆ ಇದ್ದಾರೆ. ಇದು ತುಂಬಾ ಖುಷಿ ಕೊಡುತ್ತೆ.
ಮೊದಲ ಬಾರಿ ಸಿನಿಮಾ ನಿರ್ದೇಶನಕ್ಕೆ ಇಳಿದಿದ್ದೀರಾ ಇದರ ಬಗ್ಗೆ ಹೇಳಿ?
ಹಲವು ಸಿನಿಮಾಗಳಿಗೆ ಸಹಾಯಕನಾಗಿ ದುಡಿದ್ದಿದ್ದೆ ಆದ್ರೆ ಮೊದಲ ಬಾರಿ ನಾನೇ ಪೂರ್ಣ ಪ್ರಮಾಣದ ನಿರ್ದೇಶಕನಾಗಿ ಮಾಡಿದ್ದು ಇದೇ ಮೊದಲು. ನಾನೇ ಕಥೆ ಬರೆದು ನಿರ್ದೇಶನ ಮಾಡೋದ್ರ ಜೊತೆ ಮುಖ್ಯ ಪಾತ್ರದಲ್ಲಿ ನಟಿಸಿದ್ದೇನೆ. ಸೋಲೋ ಪರ್ಫಾಮೆನ್ಸ್ ಇರುವ ಚಿತ್ರ ಇದು. ಈಗಾಗಲೇ ಶೂಟಿಂಗ್ ಪೂರ್ಣವಾಗಿ ಡಬ್ಬಿಂಗ್ ಕೆಲಸ ಕೂಡ ಮುಗಿದಿದೆ. ಚಿತ್ರಕ್ಕೆ ಟೈಟಲ್ ಇನ್ನೂ ಫೈನಲ್ ಆಗಿಲ್ಲ ಸದ್ಯದಲ್ಲೇ ಸಿನಿಮಾ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇನೆ. ಇದಲ್ಲದೆ ಇನ್ನೂ ಮೂರು ಸಿನಿಮಾ ನಿರ್ದೇಶನಕ್ಕೆ ಪ್ಲಾನ್ ಮಾಡಿದ್ದೇನೆ. ಕಥೆ, ಚಿತ್ರಕಥೆ ಎಲ್ಲವೂ ನನ್ನದೇ ಇರುತ್ತೆ. ಸದ್ಯದಲ್ಲೇ ಎಲ್ಲದರ ಬಗ್ಗೆ ಮಾಹಿತಿಯನ್ನು ನೀಡುತ್ತೇನೆ.
ನಿಮ್ಮ ಜೀವನದಲ್ಲಿ ತುಂಬಾ ಖುಷಿ ಕೊಟ್ಟ ಘಟನೆ?
ನಾನು ಯಾವಾಗಲೂ ನೆನದು ಖುಷಿ ಪಡುವ ಘಟನೆ ಡಾ. ರಾಜ್ ಕುಮಾರ್ ಅವರ ದನಿಯನ್ನ ಅವರ ಮುಂದೆಯೇ ಅನುಕರಣೆ ಮಾಡಿದ ಘಳಿಗೆ. ಹಾಸನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ರಾಜ್ ಕುಮಾರ್ ಅವರ ಭಾಗವಹಿಸಿದ್ರು, ಆ ಕಾರ್ಯಕ್ರಮದಲ್ಲಿ ನಾನೂ ಭಾಗವಹಿಸಿದ್ದೆ. ಆಗ ಅವರ ಮುಂದೆಯೇ ಅವರ ಹಾಗೆ ಮಿಮಿಕ್ರಿ ಮಾಡಿ ಮಾತನಾಡಿದಾಗ ಅಣ್ಣಾವ್ರೆ ಒಮ್ಮೆಲೇ ಆಶ್ಚರ್ಯ ಪಟ್ರು ಜೊತೆಗೆ ನನ್ನನ್ನು ಪ್ರಶಂಸಿಸಿ ಪ್ರೋತ್ಸಾಹಿಸಿದ್ರು. ಸುಮಾರು ಎಪ್ಪತ್ತು ಸಾವಿರ ಜನಗಳ ಮುಂದೆ ನಡೆದ ಈ ಘಟನೆ ಇಂದಿಗೂ ಅಮರ. ಇದನ್ನೂ ಓದಿ: ಅಣ್ಣಾವ್ರ ಕೈ ಸ್ಪರ್ಶಿಸಿದ್ದೇ ನನ್ನ ಭಾಗ್ಯ: ನಟ ಗಣೇಶ್ ರಾವ್ ಕೇಸರ್ಕರ್
ನಿಮ್ಮ ಕರಿಯರ್ ನಲ್ಲಿ ಯಾವಾಗಲೂ ನೆನಯುವ ವ್ಯಕ್ತಿ ಯಾರು?
ನಾನು ಉಪೇಂದ್ರ ಅವರ ಶ್ ಸಿನಿಮಾದಲ್ಲಿ ಮೊದಲ ಬಾರಿ ನಟಿಸಿದ್ದೆ. ಅವರ ಸಿನಿಮಾಗಳಲ್ಲಿ ಕಲಾವಿದರಿಗೆ ನಟನೆ ಮಾಡಲು ಸಂಪೂರ್ಣವಾದ ಮುಕ್ತ ಅವಕಾಶ ಇರುತ್ತೆ. ಇದು ಅವರಲ್ಲಿ ನನಗೆ ಬಹಳ ಖುಷಿ ಕೊಡುವ ಸಂಗತಿ. ಅದಾದ ಮೇಲೆ ಅವರ ಹಲವು ಸಿನಿಮಾಗಳಲ್ಲಿ ನಾನು ನಟಿಸಿದ್ದೇನೆ. ಯಾವಾಗಲೂ ಪಾಸಿಟಿವ್ ಆಗಿ ಯೋಚಿಸುವ ವ್ಯಕ್ತಿ ಉಪೇಂದ್ರ. ಅವರಿದ್ದಲ್ಲಿ ಅಸಾಧ್ಯ ಅನ್ನೋದಿಲ್ಲ ಯಾಕೆ ಆಗಲ್ಲ ಪ್ರಯತ್ನ ಪಡೋಣ ಎಂಬ ವ್ಯಕ್ತಿತ್ವ ಅವರದ್ದು. ಕಲಾವಿದರಿಗೆ ಅವರು ನೀಡುವ ಗೌರವ ತುಂಬಾ ಮೆಚ್ಚುಗೆ ಪಡುವಂತದ್ದು. ಎಲ್ಲವೂ ಗೊತ್ತಿದ್ದು ಏನು ಗೊತ್ತಿರದ ಹಾಗೆ ಇರುವ ಅಪರೂಪದ ವ್ಯಕ್ತಿ ಅವರು. ಅವರ ವ್ಯಕ್ತಿತ್ವ ಬಹಳ ಇಷ್ಟವಾಗುತ್ತೆ.
ಅವಕಾಶಗಳು ಸಿಗುತ್ತಿಲ್ಲ ಎಂಬ ದೂರಿನ ಬಗ್ಗೆ ನಿಮ್ಮ ಅಭಿಪ್ರಾಯ?
ಯಾವತ್ತೂ ಯಾರೂ ನಿಮಗೆ ಇಲ್ಲಿ ಹಾಸಿಗೆ ಹಾಸಿ ಬಂದು ಮಲಗು ಎಂದು ಹೇಳೋದಿಲ್ಲ, ನಾವೇ ಬಟ್ಟೆ ತೆಗೆದುಕೊಂಡು, ಹತ್ತಿ ತೆಗೆದುಕೊಂಡು ಹಾಸಿಗೆ ಮಾಡಿಕೊಳ್ಳಬೇಕು. ಯಾರೂ ನನಗೆ ಸಹಾಯ ಮಾಡಿಲ್ಲ ಅನ್ನೋದು ತಪ್ಪು. ನಮ್ಮ ಪ್ರತಿಭೆ ಇಟ್ಟುಕೊಂಡು ನಾವು ಬೆಳೆಯಬೇಕು. ಅವರು ಸಹಾಯ ಮಾಡಿಲ್ಲ ಇವರು ಮಾಡಿಲ್ಲ ಎಂದು ದೂರೋದು ನನ್ನ ಪ್ರಕಾರ ತಪ್ಪು. ಯಾರಾದ್ರೂ ಸಹಾಯ ಮಾಡಿದ್ರೆ ಅದು ಅವರ ದೊಡ್ಡತನ ಹೊರತು ಅದು ಅವರ ಹಕ್ಕಲ್ಲ. ನಮ್ಮಲ್ಲಿ ಪ್ರತಿಭೆ ಇದ್ರೆ ಹೊಸತನದಿಂದ ಗುರುತಿಸಿಕೊಂಡ್ರೆ ಖಂಡಿತ ಗೆಲುವು ಸಿಗುತ್ತೆ. ಪರಿಶ್ರಮ, ಪ್ರಯತ್ನ, ಸ್ವಂತಿಕೆ ಅನ್ನೋದು ಇದ್ರೆ ಜನರು ಖಂಡಿತ ನಮ್ಮನ್ನು ಬೆಳೆಸುತ್ತಾರೆ. ಇದನ್ನೂ ಓದಿ: ಶಿಕ್ಷಕನಾಗಬೇಕೆಂದು ಹೆದರಿ ನಟನಾದೆ: ಕಿರುತೆರೆ ನಟ ಜಹಂಗೀರ್