– ತಿಂಗಳಲ್ಲಿ ಒಟ್ಟು 20 ಬಾಲ್ಯ ವಿವಾಹಕ್ಕೆ ತಡೆ
ಚಾಮರಾಜನಗರ: ಜಿಲ್ಲೆಯಲ್ಲಿ ಒಂದೇ ದಿನ 7 ಬಾಲ್ಯವಿವಾಹಕ್ಕೆ ತಯಾರಿ ನಡೆಸಲಾಗುತ್ತಿದ್ದು, ಈ ಎಲ್ಲಾ ಮದುವೆಗಳನ್ನು ಮಕ್ಕಳ ಸಹಾಯವಾಣಿ ಸಿಬ್ಬಂದಿ ನಿಲ್ಲಿಸಿದ್ದಾರೆ.
ಒಂದೇ ದಿನ ಜಿಲ್ಲೆಯ ವಿವಿಧೆಡೆ ಬರೋಬ್ಬರಿ 7 ಬಾಲ್ಯವಿವಾಹ ನಡೆಸಲು ಪಾಲಕರು ಸಕಲ ತಯಾರಿ ಮಾಡಿಕೊಂಡಿದ್ದರು. ಒಡಿಪಿ ಸಂಸ್ಥೆ ಈ ಎಲ್ಲಾ ಮದುವೆಗಳನ್ನು ನಿಲ್ಲಿಸಿದೆ.
ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ಇಂಡಿಗನತ್ತ ಗ್ರಾಮದ ಕುಟುಂಬವೊಂದು 16 ವರ್ಷದ ಬಾಲೆಗೆ ದೇಗುಲವೊಂದರಲ್ಲಿ ಇಂದು ಮುಂಜಾನೆ 5 ಗಂಟೆಗೆ ಮದುವೆ ಮಾಡಲು ತಯಾರಿಕೊಂಡಿದ್ದರು. ಈ ಮಾಹಿತಿ ಪಡೆದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಕ್ಕಳ ಸಹಾಯವಾಣಿ ಅಧಿಕಾರಿಗಳು ತೆರಳಿ ಮದುವೆ ನಿಲ್ಲಿಸಿದ್ದಾರೆ.
ಹನೂರು ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ 15 ವರ್ಷದ ಬಾಲಕಿಗೆ ವಿಜೃಂಭಣೆಯ ಮದುವೆ ಮಾಡುತ್ತಿರುವ ಮಾಹಿತಿ ಪಡೆದು ಅದನ್ನೂ ನಿಲ್ಲಿಸಿದ್ದಾರೆ. ಚಾಮರಾಜನಗರ ತಾಲೂಕಿನ ಅರಕಲವಾಡಿ ಗ್ರಾಮದಲ್ಲಿ 16 ವರ್ಷದ ಬಾಲಕಿಯ ಮದುವೆ, ವೈ.ಕೆ.ಮೋಳೆಯ 14 ವರ್ಷದ ಬಾಲೆಯೊಂದಿಗಿನ ವಿವಾಹ, ಅಮಚವಾಡಿ ಹಾಗೂ ಶೆಟ್ಟಿಹಳ್ಳಿಯ ಬಾಲ್ಯವಿವಾಹವನ್ನು ಕೂಡ ಅಧಿಕಾರಿಗಳು ಇಂದು ನಿಲ್ಲಿಸಿದ್ದಾರೆ.
ಈ ತಿಂಗಳಿನಲ್ಲಿ ಒಟ್ಟು 20 ಬಾಲ್ಯ ವಿವಾಹಗಳನ್ನು ನಿಲ್ಲಿಸಿದ್ದು, ಕಳೆದ ಮೇ ತಿಂಗಳಿನಲ್ಲಿ 18 ಬಾಲ್ಯ ವಿವಾಹ ಪ್ರಕರಣಗಳನ್ನು ಮಕ್ಕಳ ಸಹಾಯವಾಣಿ ನಿಲ್ಲಿಸಿದೆ. ಮೇ ತಿಂಗಳಲ್ಲಿ ಮೂರು ಬಾಲ್ಯ ವಿವಾಹ ನಡೆದಿದ್ದು ಎರಡು ಪ್ರಕರಣದಲ್ಲಿ ಎಫ್‍ಐಆರ್ ದಾಖಲಾಗಿದೆ.
ಜಾಗೃತಿ ಮೂಡಿಸಿ ಮದುವೆಯನ್ನು ನಿಲ್ಲಿಸಿರುವುದರಿಂದ ಇಂದು ಮದುವೆ ಮಾಡುತ್ತಿದ್ದ 7 ಬಾಲಕಿಯರ ಪಾಲಕರ ವಿರುದ್ಧ ಒಡಿಪಿ ಸಂಸ್ಥೆ ದೂರು ನೀಡಿಲ್ಲ.