– 217 ಪ್ರಕರಣಗಳ ಮೂಲಕ 5ನೇ ಸ್ಥಾನಕ್ಕೆ ಬಂದ ಬಿಸಿಲನಾಡು
– ರೈಲು ಸಂಚಾರದಿಂದ ಮತ್ತೊಮ್ಮೆ ಮಹಾಸ್ಫೋಟದ ಆತಂಕ
– ದೇವದುರ್ಗ ತಾಲೂಕಿಗೆ ‘ಮಹಾ’ ನಂಜು
ರಾಯಚೂರು: ಜಿಲ್ಲೆಗೆ ಮಹಾರಾಷ್ಟ್ರದ ನಂಟಿನಿಂದ ಕೊರೊನಾ ಸೋಂಕಿನ ಮಹಾಸ್ಫೋಟವಾಗುತ್ತಿದ್ದಯ, 217 ಪಾಸಿಟಿವ್ ಪ್ರಕರಣಗಳ ಮೂಲಕ ದ್ವಿಶತಕದ ಗಡಿ ದಾಟಿದೆ. ಇಂದು ರಾಜ್ಯದಲ್ಲೇ ಹೆಚ್ಚು 83 ಪಾಸಿಟವ್ ಪ್ರಕರಣಗಳ ವರದಿಯಾಗಿದ್ದು, ಆ ಮೂಲಕ ರಾಜ್ಯದಲ್ಲಿ 5ನೇ ಸ್ಥಾನಕ್ಕೇರಿದೆ. ಜಿಲ್ಲೆಯಲ್ಲಿರುವ ಒಟ್ಟು 217 ಪ್ರಕರಣಗಳಲ್ಲಿ 212 ಮಂದಿ ಮಹಾರಾಷ್ಟ್ರದಿಂದಲೇ ಬಂದಿದ್ದಾರೆ. ಇನ್ನೂ ಮಹಾರಾಷ್ಟ್ರದಿಂದ ಬಂದ ಸಾವಿರಕ್ಕೂ ಹೆಚ್ಚು ಜನ ಸೇರಿ 3,030 ಜನರ ವರದಿ ಬರುವುದು ಬಾಕಿಯಿದೆ.
ಜಿಲ್ಲೆಯ ದೇವದುರ್ಗ ತಾಲೂಕಿಗೆ ಮಹಾರಾಷ್ಟ್ರ ನಂಜು ಹೆಚ್ಚು ತಗುಲಿದ್ದು, 187 ಜನರಲ್ಲಿ ಸೋಂಕು ದೃಢವಾಗಿದೆ. ರಾಯಚೂರು ತಾಲೂಕಿನಲ್ಲಿ 23, ಲಿಂಗಸುಗೂರು 6, ಮಸ್ಕಿ ತಾಲೂಕಿನಲ್ಲಿ 1 ಪ್ರಕರಣ ದಾಖಲಾಗಿದೆ. ಕ್ವಾರಂಟೈನ್‍ನಲ್ಲಿರದ ನಾಲ್ಕು ಜನರಲ್ಲಿ ಸೋಂಕು ಕಾಣಿಸಿಕೊಂಡಿರುವುದು ಜಿಲ್ಲೆಯ ಜನರಲ್ಲಿ ಆತಂಕ ಸೃಷ್ಟಿಸಿದೆ.
ಇಂತಹ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರ ಎರಡು ರೈಲುಗಳ ಪ್ರತಿನಿತ್ಯದ ಓಡಾಟ ಆರಂಭಿಸುತ್ತಿರುವುದು ಜಿಲ್ಲೆಗೆ ಮತ್ತೊಂದು ಶಾಕ್ ಕೊಟ್ಟಂತಾಗಿದೆ. ಮುಂಬೈ ನಿಂದ ಬರುವ ಉದ್ಯಾನ ಎಕ್ಸ್ ಪ್ರೆಸ್ ರಾಯಚೂರಿನ ಮೂಲಕ ಬೆಂಗಳೂರಿಗೆ ಹೋಗಲಿದೆ. ನಿಜಾಮಬಾದ್ ನಿಂದ ತಿರುಪತಿಗೆ ಹೋಗುವ ರಾಯಲಸೀಮಾ ಎಕ್ಸ್ ಪ್ರೆಸ್ ಓಡಾಟ ಆರಂಭಿಸಲಿದೆ. ಮುಂಬೈನಿಂದ ಬರುವ ಜನರಲ್ಲಿ ಈಗಾಗಲೇ ಸುಮಾರು 500 ಜನ ಟಿಕೆಟ್ ರದ್ದು ಮಾಡಿಕೊಂಡಿದ್ದು, ರೈಲ್ವೇ ಇಲಾಖೆ 8 ಲಕ್ಷ ರೂಪಾಯಿ ಹಣ ಮರುಪಾವತಿಸಿದೆ. ಆದರೂ ಜಿಲ್ಲೆಗೆ ಕೊರೊನಾ ಸೋಂಕಿನ ಭೀತಿ ಕಡಿಮೆಯಾಗಿಲ್ಲ.
ರೈಲ್ವೇ ನಿಲ್ದಾಣದಲ್ಲಿ ಜನರಲ್ ಟಿಕೆಟ್ ಇಲ್ಲ. ಪ್ಲಾಟ್ ಫಾರಂ ಟಿಕೆಟ್ ಇಲ್ಲ, ಬರುವ ಪ್ರತಿಯೊಬ್ಬರನ್ನೂ ಸ್ಕ್ರೀನಿಂಗ್ ಮಾಡಲಾಗುತ್ತದೆ. ಮಹಾರಾಷ್ಟ್ರ ಸೇರಿ ಹೈ ರಿಸ್ಕ್ ರಾಜ್ಯದಿಂದ ಬರುವವರನ್ನು ನೇರವಾಗಿ ಸರ್ಕಾರಿ ಕ್ವಾರಂಟೈನ್ ಕೇಂದ್ರಗಳಿಗೆ ಕಳುಹಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಬೇರೆಡೆಯಿಂದ ಬರುವವರನ್ನು ಸ್ಕ್ರೀನಿಂಗ್ ಮಾಡಿ ಹೋಂ ಕ್ವಾರಂಟೈನ್ ಮಾಡುವುದಾಗಿ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.