ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಸರಕುಳಿ ಗ್ರಾಮದಲ್ಲಿ ಮೂರು ವರ್ಷದ ಮಗುವಿನಿಂದ ಹಿಡಿದು 77 ವರ್ಷದ ವೃದ್ಧನವರೆಗೆ 18 ಜನರಿರುವ ಇಡೀ ಕುಟುಂಬವೇ ಕೊರೊನಾ ಗೆಲ್ಲುವ ಮೂಲಕ ಸಂಭ್ರಮ ಆಚರಿಸಿದ್ದಾರೆ.
ಚಿಕ್ಕ ಮಕ್ಕಳಿಂದ ಹಿಡಿದು 77 ವರ್ಷದ ವೃದ್ಧ ಸೇರಿದಂತೆ ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಿತ್ತು. ಅವಿಭಕ್ತವಾಗಿರುವ ಈ ಕುಟುಂಬದಲ್ಲಿ ಚಿಕ್ಕ ಮಕ್ಕಳು ಸೇರಿ ಒಟ್ಟು 18 ಜನರಿದ್ದಾರೆ. ಇದರಲ್ಲಿ 77 ವರ್ಷದ ಮನೆಯ ಯಜಮಾನ ಲೋಕೇಶ್ವರ್ ಹೆಗಡೆ ಅವರಿಗೆ ಸೋಂಕು ದೃಡಪಟ್ಟಿತ್ತು. ತಕ್ಷಣ ಇಡೀ ಕುಟುಂಬದ ಸದಸ್ಯರು ಸಹ ತಪಾಸಣೆ ನಡೆಸಿದಾಗ ಎಲ್ಲರಿಗೂ ಪಾಸಿಟಿವ್ ಬಂದಿತ್ತು.
ವೈದ್ಯರ ಮಾರ್ಗದರ್ಶನದಲ್ಲಿ ಹೋಮ್ ಐಸೋಲೇಷನ್ ನಲ್ಲಿ ಚಿಕಿತ್ಸೆ ಪಡೆದು ಇಂದು ಗುಣಮುಖರಾಗಿದ್ದಾರೆ. ಇಡೀ ಕುಟುಂಬದ ಸದಸ್ಯರು ಮನೆಯ ಹೊರ ನಿಂತು ಕುಟುಂಬದ ಯಜಮಾನನ ಮೂಲಕ ಟೇಪ್ ಕಟ್ ಮಾಡಿಸಿ ಸಂಭ್ರಮ ಹಂಚಿಕೊಂಡರು.