ಲಕ್ನೋ: ಒಂದೇ ಕುಟುಂಬದ ಮೂವರು ಸದಸ್ಯರು ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ಭಾನುವಾರ ನಡೆದಿದೆ.
ಮೃತ ದೇಹವನ್ನು ಪತ್ತೆ ಮಾಡಿದ ಪೊಲೀಸರು ಮೃತರನ್ನು ನೀರಜ್ ಗೋಯಲ್, ಪತ್ನಿ ರೀಮಾ ಮತ್ತು ಮಗ ಅನ್ಮೋಲ್ ಎಂದು ಗುರುತಿಸಿದ್ದಾರೆ. ಅಲ್ಲದೆ ತನಿಖೆ ವೇಳೆ ನೀರಜ್ ಗೋಯಲ್ ಅಂಗಡಿ ವ್ಯಾಪಾರಿ ಎಂದು ತಿಳಿದುಬಂದಿದೆ.
ನೀರಜ್ ಗೋಯಲ್ ಮನೆಯವರು ಮುಂಜಾನೆಯಾದರೂ ಬಾಗಿಲು ತೆರೆಯದ ಕಾರಣ ಅನುಮಾನಗೊಂಡ ಅವರ ನೆರೆಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಘಟನಾ ಸ್ಥಳಕ್ಕೆ ಬಂದ ಪೊಲೀಸರು ಬಾಗಿಲನ್ನು ಒಡೆದು ಮನೆಗೆ ನುಗ್ಗಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನೀರಜ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತನ ಪತ್ನಿ ರೀಮಾ ಮತ್ತು ಮಗ ಅನ್ಮೋಲ್ ಹಾಸಿಗೆ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು.
ಈ ಕುರಿತಂತೆ ಪರಿಶೀಲನೆ ನಡೆಸಿದ ಪೊಲೀಸರಿಗೆ ರಿಮಾ ಮತ್ತು ಆಕೆಯ ಮಗ ವಿಷ ಸೇವಿಸಿರುವ ವಿಚಾರ ತಿಳಿದುಬಂದಿದೆ. ಇದನೆಲ್ಲಾ ಗಮನಿಸಿದ ಪೊಲೀಸರು ಇದು ಮರ್ಡರ್ ಕಮ್ ಸೂಸೈಡ್ ಎಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಪ್ರಕರಣ ಕುರಿತಂತೆ ಪೊಲೀಸರಿಗೆ ಪ್ರಾಥಮಿಕ ತನಿಖೆಯಲ್ಲಿ ನೀರಜ್ ಹಾಗೂ ರೀಮಾ ಸುಮಾರು 3 ವರ್ಷಗಳ ಹಿಂದೆ ವಿವಾಹವಾಗಿದ್ದರು. ಆದರೆ ಅವರಿಬ್ಬರ ನಡುವಿನ ಸಂಬಂಧ ಸರಿಯಾಗಿರಲಿಲ್ಲ ಎಂಬ ಸತ್ಯ ಬಹಿರಂಗಗೊಂಡಿದೆ. ಅಲ್ಲದೆ ರೀಮಾ ನೀರಜ್‍ಗಿಂತಲೂ ಮೊದಲೇ ವಿವಾಹವಾಗಿದ್ದು, ಇದು ಅವಳಿಗೆ ಎರಡನೇ ಮದುವೆಯಾಗಿದೆ ಹಾಗೂ ಅನ್ಮೋಲ್ ರೀಮಾಳ ಮೊದಲು ಮದುವೆಯಾಗಿದ್ದ ಸಮಯದಲ್ಲಿ ಜನಿಸಿದ ಮಗುವಾಗಿದ್ದಾನೆ ಎಂದು ಪೊಲೀಸರಿಗೆ ಮಾಹಿತಿ ಸಿಕ್ಕಿದೆ.