– ಶವದ ಪಕ್ಕದಲ್ಲಿ ನಿಂಬೆ ಹಣ್ಣು, ಕಾಯಿ ಪತ್ತೆ
– ನಿಧಿಯ ಆಸೆಗಾಗಿ ಜೀವ ಕಳೆದುಕೊಂಡ್ರಾ?
ಹೈದರಾಬಾದ್: ಮನೆಯೊಂದರಲ್ಲಿ ಒಂದೇ ಕುಟುಂಬದ ನಾಲ್ವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿರುವ ಘಟನೆ ತೆಲಂಗಾಣದ ವನಪರ್ತಿ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಅಜ್ಮೀರಾ ಬೀ (63), ಅವರ ಪುತ್ರಿ ಆಸ್ಮಾ ಬೇಗಂ (35), ಅಳಿಯ ಖವಾಜಾ ಪಾಷಾ (42) ಮತ್ತು ಮೊಮ್ಮಗಳು ಹಸೀನಾ (10) ಎಂದು ಗುರುತಿಸಲಾಗಿದೆ. ಮಹಿಳೆ, ಆಕೆಯ ಮಗಳು, ಅಳಿಯ ಮತ್ತು ಮೊಮ್ಮಗಳ ಮೃತದೇಹಗಳು ಮನೆಯ ವಿವಿಧ ಭಾಗಗಳಲ್ಲಿ ಪತ್ತೆಯಾಗಿವೆ. ಮೂವರ ಶವ ಮನೆಯೊಳಗೆ ಮೂರು ವಿಭಿನ್ನ ಸ್ಥಳಗಳಲ್ಲಿ ಪತ್ತೆಯಾಗಿವೆ. ಅಳಿಯ ಮನೆಯ ಹಿಂಭಾಗದಲ್ಲಿ ಪತ್ತೆಯಾಗಿದ್ದಾನೆ. ದೇಹದ ಪಕ್ಕದಲ್ಲಿ ನಿಂಬೆ ಹಣ್ಣಿನ ಪ್ಯಾಕೆಟ್ ಕಂಡುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮನೆಯಿಂದ ಯಾರೂ ಹೊರಗೆ ಬಾರದ ಹಿನ್ನೆಲೆಯಲ್ಲಿ ಅನುಮಾನಗೊಂಡ ನೆರೆಹೊರೆಯವರು ಒಳಗೆ ಹೋಗಿ ನೋಡಿದ್ದಾರೆ. ಆಗ ಕುಟುಂಬದ ಎಲ್ಲ ಸದಸ್ಯರು ಮೃತಪಟ್ಟಿರುವುದು ತಿಳಿದುಬಂದಿದೆ. ತಕ್ಷಣ ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ನಾಲ್ಕು ಶವಗಳು ಮನೆಯ ವಿವಿಧ ಭಾಗಗಳಲ್ಲಿ ಪತ್ತೆಯಾಗಿವೆ. ದೇಹಗಳಲ್ಲಿ ಯಾವುದೇ ಗಾಯಗಳು ಅಥವಾ ಗುರುತುಗಳು ಕಂಡುಬಂದಿಲ್ಲ. ವಿಷ ಸೇವಿಸಿದಂತೆ ಕಾಣುತ್ತದೆ. ಮನೆಯ ಹಿಂಭಾಗ 1 ಅಡಿ ಆಳದ ಹಳ್ಳದ ಪಕ್ಕದಲ್ಲಿ ಅಳಿಯನ ಶವ ಪತ್ತೆಯಾಗಿದೆ. ಹಳ್ಳದೊಳಗೆ ನಿಂಬೆಹಣ್ಣುಗಳು ಕಂಡುಬಂದಿವೆ. ಮನೆಯೊಳಗೆ ನಿಂಬೆ ಮತ್ತು ತೆಂಗಿನಕಾಯಿ ಕೂಡ ಪತ್ತೆಯಾಗಿದೆ. ಹೀಗಾಗಿ ನಾವು ಎಲ್ಲ ರೀತಿಯ ಆಯಾಮಗಳಲ್ಲಿಯೂ ತನಿಖೆ ಮಾಡುತ್ತಿದ್ದೇವೆ ಎಂದು ವನಪಾರ್ತಿ ಜಿಲ್ಲಾ ಎಸ್‍ಪಿ ಅಪೂರ್ವಾ ರಾವ್ ಹೇಳಿದ್ದಾರೆ.
ಖವಾಜಾ ಪಾಷಾ ಆಗಾಗ ನಿಧಿ ಹುಡುಕುತ್ತಾ ಮನೆಯ ಸುತ್ತಲೂ ಹೊಂಡಗಳನ್ನು ಅಗೆಯುತ್ತಿದ್ದನು ಎಂದು ಮೃತರ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ಅಲ್ಲದೇ ಮನೆಯ ಹಿಂಭಾಗದಲ್ಲಿರುವ ಹಳ್ಳದ ಪಕ್ಕದಲ್ಲಿ ಆತನ ಶವ ಪತ್ತೆಯಾಗಿರುವುದು ಅನುಮಾನ ಮೂಡಿಸಿದೆ.
ಅಲ್ಲದೇ ಖವಾಜಾ ಹುಡುಕುತ್ತಿದ್ದ ನಿಧಿಯನ್ನು ಹುಡುಕುವ ಆಶಯದಿಂದ ಕುಟುಂಬವು ವಿಷ ಸೇವಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.