ಹುಬ್ಬಳ್ಳಿ: ಕಳೆದ 10-15 ದಿನಗಳಲ್ಲಿ ಒಂದೇ ಕುಟುಂಬದ ನಾಲ್ವರು ಕೊರೊನಾಗೆ ಬಲಿಯಾಗಿದ್ದಾರೆ. ಇದು ಇಡೀ ಕುಟುಂಬವನ್ನು ದುಃಖದಲ್ಲಿ ಮಡುಗಟ್ಟುವಂತೆ ಮಾಡಿದೆ.
ಕುಂದಗೋಳ ತಾಲೂಕಿನ ಚಿಕ್ಕಗುಂಜಳ ಗ್ರಾಮದ ಹಿರೇತನದ ಎಂಬುವವರ ಮನೆಯಲ್ಲಿನ ತಾಯಿ, ಮೂವರು ಮಕ್ಕಳು ಕೊರೊನಾಗೆ ಬಲಿಯಾಗಿದ್ದಾರೆ. ತಂದೆ ಆಸ್ಪತ್ರೆಯಲ್ಲಿದ್ದಾರೆ.
ಸೋಂಕು ಹೇಗೆ ಬಂತು?
ಮನೆಯ ಹಿರಿಯ ಸದಸ್ಯರಾದ 80 ವರ್ಷದ ನಿವೃತ್ತ ಶಿಕ್ಷಕರಿಗೆ ಆರಂಭದಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರನ್ನು ಆರೈಕೆ ಮಾಡುತ್ತಿದ್ದರಿಂದ ಪತ್ನಿ ಶಾಂತಮ್ಮ (75)ಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕೆನ್ನುವಷ್ಟರಲ್ಲೇ ಕೊನೆಯುಸಿರೆಳೆದಿದ್ದಾರೆ. ಬಳಿಕ ಎರಡು ದಿನಗಳಲ್ಲಿ ದೊಡ್ಡ ಮಗ ಮಂಜುನಾಥ್ ಸಹ ಕೊರೊನಾ ಸೋಂಕಿನಿಂದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅದೇ ರೀತಿ ಎರಡನೇ ಮಗ ಅರವಿಂದ್ ಹಾಗೂ ಮೂರನೆಯ ಮಗ ಸುರೇಶ್ ಅವರಿಗೂ ಕೊರೊನಾ ಕಾಣಿಸಿಕೊಂಡಿದೆ. ಮೊನ್ನೆ ಅರವಿಂದ್, ಇಂದು ಸುರೇಶ್ ಸಾವಿಗೀಡಾಗಿದ್ದಾರೆ. ಹೀಗೆ 10-15 ದಿನಗಳಲ್ಲಿ ತಾಯಿ ಹಾಗೂ ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ. ಆರಂಭದಲ್ಲಿ ಕೊರೊನಾ ಪತ್ತೆಯಾದ ತಂದೆ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮನೆಯ ಮೂವರು ಗಂಡು ಮಕ್ಕಳು ಮೃತಪಟ್ಟಂತಾಗಿದ್ದು, ದಿಕ್ಕೇ ತೋಚದಂತಾಗಿದೆ ಎಂದು ಕುಟುಂಬದ ಸದಸ್ಯರು ಕಣ್ಣೀರು ಸುರಿಸುತ್ತಿದ್ದಾರೆ. ಕೊರೊನಾ ಹಿನ್ನೆಲೆ ಸಾಂತ್ವನ ಹೇಳಲು ಕೂಡ ಯಾರೂ ಇವರ ಮನೆಯತ್ತ ಹೋಗುತ್ತಿಲ್ಲ.