-ಪತ್ನಿಯನ್ನ ಕೂಡಿ ಹಾಕಿದ್ದ ಪತಿ ಅರೆಸ್ಟ್
ಚಂಡಿಗಢ: ಒಂದೂವರೆ ವರ್ಷದಿಂದ ಪುಟ್ಟ ಶೌಚಾಲಯದಲ್ಲಿ ಬಂಧಿಯಾಗಿದ್ದ 35 ವರ್ಷದ ಮಹಿಳೆಯನ್ನ ರಕ್ಷಿಸಲಾಗಿದೆ. ಹರ್ಯಾಣದ ಪಾಣಿಪತ್ ಜಿಲ್ಲೆಯ ರಿಷ್ಪುರ ಗ್ರಾಮದಲ್ಲಿ ಮಹಿಳೆಯನ್ನ ರಕ್ಷಣೆ ಮಾಡಲಾಗಿದೆ.
ಮಹಿಳೆಗೆ ಮೂರು ಮಕ್ಕಳಿದ್ದು, ಆಕೆಯನ್ನ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಶೌಚಾಲಯದಿಂದ ಮುಕ್ತಗೊಳಿಸಿದ್ದಾರೆ. ಮಹಿಳೆಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ನಂತರ ಮಹಿಳೆಯನ್ನ ಸಂಬಂಧಿಕರ ವಶಕ್ಕೆ ನೀಡಲಾಗಿದೆ. ಪತಿ ನರೇಶ್ ಕುಮಾರ್ ನಿಂದ ಮಹಿಳೆ ಟಾಯ್ಲೆಟ್ ನಲ್ಲಿ ಬಂಧಿಯಾಗಿರುವ ವಿಷಯ ತಿಳಿದ ಜಿಲ್ಲಾ ಮಹಿಳಾ ರಕ್ಷಣಾ ಅಧಿಕಾರಿ ರಜಿನಿ ಗುಪ್ತಾ ಪೊಲೀಸರ ಜೊತೆ ಸ್ಥಳಕ್ಕೆ ಭೇಟಿ ನೀಡಿದ್ದರು. ಪುಟ್ಟದಾದ ಟಾಯ್ಲೆಟ್ ನಲ್ಲಿ ಮಹಿಳೆ ಇರೋದು ಗುಪ್ತಾರ ಗಮನಕ್ಕೆ ಬಂದಿದೆ.
ಮಹಿಳೆ ಶೋಚನೀಯ ಸ್ಥಿತಿಯಲ್ಲಿರೋದು ನಮ್ಮ ಗಮನಕ್ಕೆ ಬಂತು. ಸರಿಯಾದ ಆಹಾರ ನೀಡದ ಪರಿಣಾಮ ಆಕೆಗೆ ನಡೆಯಲು ಸಹ ಆಗುತ್ತಿರಲಿಲ್ಲ. ಆಕೆಯ ಪತಿ ಕಳೆದ ಒಂದೂವರೆ ವರ್ಷದಿಂದ ಪತ್ನಿಯ ಜೊತೆ ಅಮಾನವೀಯ ನಡೆದುಕೊಂಡಿದ್ದಾನೆ. ನಾವು ಆಕೆಗೆ ಊಟ ನೀಡಿದಾಗ 8 ಚಪಾತಿ ಸಹ ತಿಂದಳು ಎಂದು ರಜನಿ ಗುಪ್ತಾ ಹೇಳಿದ್ದಾರೆ.
ಮಹಿಳೆಗೆ 17 ವರ್ಷದ ಹಿಂದೆ ನರೇಶ್ ಕುಮಾರ್ ಎಂಬಾತನ ಜೊತೆ ಮದುವೆಯಾಗಿತ್ತು. ಮಹಿಳೆಗೆ 15 ವರ್ಷದ ಮಗಳು ಮತ್ತು 11, 13 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಪತ್ನಿ ಮಾನಸಿಕ ಅಸ್ವಸ್ಥ ಹಿನ್ನೆಲೆ ಆಕೆಯನ್ನ ಬಂಧನದಲ್ಲಿರಿಸಲಾಗಿತ್ತು ಎಂದು ನರೇಶ್ ಕುಮಾರ್ ಹೇಳಿದ್ದಾನೆ. ಆದ್ರೆ ಮಹಿಳೆ ತನ್ನ ಸಂಬಂಧಿಕರು ಮತ್ತು ಮಕ್ಕಳನ್ನ ಗುರುತಿಸಿದ್ದಾಳೆ. ಹಾಗೆ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೆ ಸರಿಯಾಗಿ ಉತ್ತರ ನೀಡಿದ್ದಾರೆ. ಪತ್ನಿ ಮಾನಸಿಕ ಸ್ಥಿತಿಗತಿ ಸರಿಯಾಗಿಲ್ಲ ಎಂಬುದರ ಕುರಿತು ನರೇಶ್ ಕುಮಾರ್ ಯಾವುದೇ ದಾಖಲೆಗಳನ್ನ ನೀಡಿಲ್ಲ.
Haryana: A woman who was allegedly locked inside a toilet for over a year by her husband was rescued by Women Protection&Child Marriage Prohibition Officer in Panipat.Victim's husband claims that she is mentally unstable. Police say,"Complaint has been filed,action will be taken" pic.twitter.com/HVriII2jwj
— ANI (@ANI) October 15, 2020
ಸದ್ಯ ಮಹಿಳೆ ಪತಿ ನರೇಶ್ ಕುಮಾರ್ ವಿರುದ್ಧ ಸೆಕ್ಷನ್ 498 (ಎ) ಮತ್ತು 342 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮಹಿಳೆಯ ಪತಿಯನ್ನ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಸನೋಲಿ ಪೊಲೀಸ್ ಠಾಣೆಯ ಇನ್ಚಾರ್ಜ್ ಸುರೇಂದ್ರ ದಹಿಯಾ ಹೇಳಿದ್ದಾರೆ.