ಚಾಮರಾಜನಗರ: ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಚಾಮರಾಜನಗರ ಎಪಿಎಂಸಿ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ) ತರಕಾರಿ ಮಾರುಕಟ್ಟೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ತರಕಾರಿ ಮಂಡಿಗಳನ್ನು ಇಂದಿನಿಂದ ಆರು ದಿನಗಳ ಕಾಲ ಮುಚ್ಚಲು ತರಕಾರಿ ವ್ಯಾಪಾರಿಗಳು, ದಲ್ಲಾಳಿಗಳು ತೀರ್ಮಾನಿಸಿದ್ದು, ಎಪಿಎಂಸಿಯಲ್ಲಿ ತರಕಾರಿ ವ್ಯಾಪಾರ ವಹಿವಾಟು ಸ್ಥಗಿತಗೊಂಡಿದೆ. ಈ ಮಾಹಿತಿ ಇಲ್ಲದೆ ಇಂದು ಮಾರುಕಟ್ಟೆಗೆ ತರಕಾರಿ ತಂದ ಕೆಲ ರೈತರು ನಿರಾಶರಾಗಿ ವಾಪಸ್ ಹೋಗಬೇಕಾಯಿತು. ಇಷ್ಟು ದಿನ ರೈತರು, ವ್ಯಾಪಾರಿಗಳು, ದಲ್ಲಾಳಿಗಳಿಂದ ಗಿಜಿಗುಡುತ್ತಿದ್ದ ಎಪಿಎಂಸಿ ತರಕಾರಿ ಮಾರುಕಟ್ಟೆ ಇಂದು ಬಿಕೋ ಎನ್ನುತ್ತಿತ್ತು.
Advertisement
Advertisement
ರೈತರು, ಸಗಟು, ಚಿಲ್ಲರೆ ವ್ಯಾಪಾರಿಗಳು, ದಲ್ಲಾಳಿಗಳು ಸೇರಿದಂತೆ ನಿತ್ಯ ಎರಡು ಸಾವಿರಕ್ಕೂ ಹೆಚ್ಚು ಮಂದಿ ತರಕಾರಿ ಮಂಡಿಗೆ ಬರುತ್ತಾರೆ. ತರಕಾರಿ ಹರಾಜು ಮತ್ತು ವ್ಯಾಪಾರದ ವೇಳೆ ಸಾಮಾಜಿಕ ಅಂತರ ಕಾಪಾಡುವುದು ಕಷ್ಟವಾಗಿದೆ. ಹೀಗಾಗಿ ಜನಜಂಗುಳಿಯಿಂದ ಕೊರೊನಾ ಹರಡುವ ಸಾಧ್ಯತೆಗಳಿವೆ. ಇದರಿಂದ ಜೂನ್ 29 ರಿಂದ ಜುಲೈ 4 ರವರೆಗೆ ತಾತ್ಕಾಲಿಕವಾಗಿ ತರಕಾರಿ ಮಂಡಿ ಮುಚ್ಚಲು ತರಕಾರಿ ವ್ಯಾಪಾರಿಗಳು ಹಾಗೂ ದಲ್ಲಾಳಿಗಳು ಸಭೆ ಸೇರಿ ತೀರ್ಮಾನ ಕೈಗೊಂಡಿದ್ದಾರೆ.