ಬೆಂಗಳೂರು: ನಳಿನ್ ಕುಮಾರ್ ಕಟೀಲ್ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶುಭಾಶಯ ತಿಳಿಸಿದ್ದಾರೆ.
ಸಿಎಂ ಯಡಿಯೂರಪ್ಪ ವಿಡಿಯೋ ಮೂಲಕ ಮಾತನಾಡಿ, ಉತ್ತಮ ಸಂಘಟಕ ಎಂಬ ಹೆಗ್ಗಳಿಕೆ ಪಡೆದಿರುವ ನಳಿನ್ ಅವರು ಕಳೆದ ಒಂದು ವರ್ಷದಿಂದ ರಾಜ್ಯವನ್ನ ಎರಡು ಮೂರು ಬಾರಿ ಸುತ್ತಿದ್ದಾರೆ. ರಾಜ್ಯದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರಲ್ಲಿ ಉತ್ಸಾಹ, ಆತ್ಮವಿಶ್ವಾಸ ಮೂಡಿಸುವ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದಿದ್ದಾರೆ.
ಅನೇಕ ಚುನಾವಣೆಗಳಲ್ಲೂ ಪಕ್ಷದ ಯಶಸ್ಸಿಗೆ ನಳಿನ್ ಕುಮಾರ್ ಕಾರಣಕರ್ತರಾಗಿದ್ದಾರೆ. ಬರುವಂತಹ ದಿನಗಳಲ್ಲಿ ಇನ್ನಷ್ಟು ಶ್ರಮದಿಂದ ಕೆಲಸ ಮಾಡಿ ಪಕ್ಷವನ್ನ ಕಟ್ಟುವಂತಹ ಕೆಲಸ ಮಾಡಲು ದೇವರು ಶಕ್ತಿ ಕೊಡಲಿ ಎಂದು ನಾನು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ನಳಿನ್ ಕುಮಾರ್ ಕಟೀಲ್ ಅವರು ಆರ್‍ಎಸ್‍ಎಸ್ ಸಂಘಟನೆಯಲ್ಲಿ ಬೆಳೆದವರು. ಹೀಗಾಗಿ ಅವರಿಗೆ ಸಂಘಟನೆಯನ್ನು ಹೇಗೆ ಬೆಳೆಸಬೇಕು ಎಂದು ಅವರಿಗೆ ಚೆನ್ನಾಗಿದೆ ಗೊತ್ತಿದೆ. ಆದ್ದರಿಂದ ಪಕ್ಷ, ಸಂಘಟನೆಯಲ್ಲೂ ಕಟೀಲ್ ಯಶಸ್ವಿಯಾಗಿದ್ದಾರೆ ಎಂಬುದು ಸಂತಸ ತರುವ ವಿಚಾರವಾಗಿದೆ. ಕಟೀಲ್ ಅವರು ಒಂದು ವರ್ಷದ ಕಾಲ ಪಕ್ಷದ ರಥವನ್ನ ಯಶಸ್ವಿಯಾಗಿ ಮುಂದಕ್ಕೆ ಎಳೆದಿದ್ದಾರೆ. ಮುಂದಿನ ದಿನಗಳಲ್ಲಿ ಪಕ್ಷ ಕಟ್ಟುವ ಶಕ್ತಿ, ಚೈತನ್ಯ ಇನ್ನಷ್ಟು ಕೊಡಲಿ ಸಿಎಂ ಯಡಿಯೂರಪ್ಪ ಅವರು ನಳಿನ್ ಕುಮಾರ್ ಅವರಿಗೆ ಶುಭಾಶಯ ಕೋರಿದರು.