– ನರೇಂದ್ರ ಮೋದಿ ವಿಶ್ವನಾಯಕ
ಹುಬ್ಬಳ್ಳಿ: ಮೇ 30 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಗಿದೆ. ಸಬ್ ಕಾ ಸಾತ್, ಸಬ್ ಕ ವಿಕಾಸ್ ಧ್ಯೇಯದೊಂದಿಗೆ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ಪ್ರಧಾನಿ ಹಲವು ಐತಿಹಾಸಿಕ ತೀರ್ಮಾನಗಳನ್ನು ಕೈಗೊಳ್ಳುವುದರ ಮೂಲಕ ಸಾಧನೆಗಳನ್ನು ಮಾಡಿದ್ದಾರೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತವಾರಿ ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ಹುಬ್ಬಳ್ಳಿ ಸಕ್ರ್ಯೂಟ್ ಹೌಸ್ ನಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಮೊದಲನೇ ವರ್ಷದಲ್ಲಿ ಕೈಗೊಂಡ ಯೋಜನೆ ಹಾಗೂ ಸಾಧನೆಗಳ ಕುರಿತಾಗಿ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.
ಎರಡನೇ ಬಾರಿಗೆ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ 353 ಸ್ಥಾನಗಳನ್ನು ಪಡೆದಿದೆ. ಇದರಲ್ಲಿ ಬಿಜೆಪಿ ಪಕ್ಷ 303 ಸ್ಥಾನಗಳಿಸಿದೆ. ಕರ್ನಾಟಕದಲ್ಲಿ 28 ಲೋಕಸಭಾ ಸ್ಥಾನಗಳ ಪೈಕಿ 25 ಸ್ಥಾನಗಳಲ್ಲಿ ಗೆಲ್ಲುವುದರ ಮೂಲಕ ಇತಿಹಾಸ ನಿರ್ಮಿಸಲಾಗಿದೆ.
ಒನ್ ಕಂಟ್ರಿ ಒನ್ ಟ್ಯಾಕ್ಸ್ ಮಾದರಿಯಲ್ಲಿ ಒನ್ ಕಂಟ್ರಿ ಒನ್ ರೇಷನ್ ಕಾರ್ಡ್ ಯೋಜನೆ ಜಾರಿಗೆ ತರಲಾಗಿದೆ. ಇದರಿಂದ ಅನ್ಯ ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸರ್ಕಾರಿ ಪಡಿತರ ದೊರೆಯಲಿದೆ. ಸರ್ಕಾರದಿಂದ ಫಲಾನುಭವಿಗಳಿಗೆ ಖಾತೆಗೆ ನೇರ ಹಣ ವರ್ಗಾವಣೆ (ಆಃಖಿ) ಮಾಡಲಾಗುತ್ತದೆ. ಮೋದಿಯವರು ವೈಯಕ್ತಿಕವಾಗಿ ತಮ್ಮ ಕಾರ್ಯದಲ್ಲಿ ಪಾರದರ್ಶಕತೆ ಕಾಪಾಡಿಕೊಂಡಿದ್ದಾರೆ. ಸರ್ಕಾರದಲ್ಲಿ ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ.
ತ್ರಿವಳಿ ತಲಾಖ್, ಸಂವಿಧಾನ 370 ನೇ ವಿಧಿ ರದ್ದು, ಪೌರತ್ವ ಕಾಯ್ದೆ ತಿದ್ದುಪಡಿ, ರಾಮ ಮಂದಿರ ನಿರ್ಮಾಣ ದೇಶದಲ್ಲಿ ನಿಜಕ್ಕೂ ಐಕ್ಯತೆಯನ್ನು ತಂದಿವೆ. ಈ ಎಲ್ಲಾ ಸಂದರ್ಭದಲ್ಲಿ ದೇಶದ ಜನತೆ ಸಮಧಾನದಿಂದ ವರ್ತಿಸಿದ್ದಾರೆ. ಹಲವು ವರ್ಷಗಳ ಸಮಸ್ಯೆಗಳನ್ನು ಬಗೆ ಹರಿದಿವೆ. ಮುಖ್ಯವಾಗಿ ಸಂವಿಧಾನ 370 ನೇ ವಿಧಿ ರದ್ದುಪಡಿಯನ್ನು ಕಾಶ್ಮೀರದಲ್ಲಿ ಹಿಂಸಾಚಾರವಿಲ್ಲದೆ ಜಾರಿಗೊಳಿಸಲಾಗಿದೆ. ರಾಮ ಮಂದಿರ ತೀರ್ಪನ್ನು ದೇಶದ ಜನ ಸಮಚಿತ್ತವಾಗಿ ಸ್ವೀಕರಿಸಿ ಕೋಮು ಸೌಹಾರ್ದತೆಯನ್ನು ಎತ್ತಿ ಹಿಡಿದ್ದಾರೆ.
ಸಂಸತ್ತಿನಲ್ಲಿ ಭಯೋತ್ಪಾದನೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಕುರಿತು ಕಠಿಣ ಕಾನೂನುಗಳನ್ನು ರೂಪಿಸಲಾಗಿದೆ. ವೈಜ್ಞಾನಿಕ ಕ್ಷೇತ್ರದಲ್ಲಿ ಸಾಧನೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದ್ದು, ಚಂದ್ರಯಾನದಂತಹ ಪ್ರಯೋಗಗಳು ವಿಶ್ವದ ಗಮನ ಸೆಳೆದಿವೆ. ಈ ಸಾಧನೆ ಮಾಡಿದ ನಾಲ್ಕು ದೇಶಗಳ ಸಾಲಿನಲ್ಲಿ ಭಾರತವೂ ನಿಲ್ಲುತ್ತದೆ. ಕೃಷಿ ಹಾಗೂ ಕಾರ್ಪೋರೆಟ್ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಘೋಷಿಸಿದೆ. ಕಾರ್ಪೋರೇಟ್ ತೆರಿಗೆಯನ್ನು ಕಡಿಮೆ ಮಾಡಲಾಗಿದೆ. ರೈತರಿಗೆ 6 ಸಾವಿರ ಸಹಾಯಧನ ನೀಡಲಾಗುತ್ತಿದೆ.
ನರೇಂದ್ರ ಮೋದಿ ವಿಶ್ವನಾಯಕ:
ಜಾಗತಿಕ ಮಟ್ಟದಲ್ಲಿ ಭಾರತ ತನ್ನ ಪ್ರಭಾವನ್ನು ಹೆಚ್ಚಿಸಿಕೊಳ್ಳುತ್ತಿದೆ. ಮೋದಿಯವರು ನೆರೆ ರಾಷ್ಟ್ರಗಳು, ಅರಬ್ ದೇಶಗಳು, ಯುರೋಪಿನ್, ಅಮೇರಿಕಾ ದೇಶಗಳೊಂದಿಗೆ ಉತ್ತಮ ರಾಜತಾಂತ್ರಿಕ ಸಂಬಂದ ಗಟ್ಟಿಗೊಳ್ಳಲು ಕಾರಣೀಕರ್ತರಾಗಿದ್ದಾರೆ. ವಿದೇಶಗಳ ಕೂಡ ಜನಪ್ರಿಯತೆ ಗಳಿಸಿದ್ದಾರೆ. ಅಮೇರಿಕಾದಲ್ಲಿ ಜರುಗಿದ ಹೌಡಿ ಮೋದಿ ಸಮಾವೇಶ ಇದಕ್ಕೆ ಒಂದು ಉದಾಹರಣೆ.
ಕೊರೊನಾ ವಿರುದ್ದ ದಿಟ್ಟ ಹೋರಾಟ:
ವಿಶ್ವದ ಹಲವು ರಾಷ್ಟ್ರಗಳು ಕೊರೊನಾ ಸಂಕಷ್ಟಕ್ಕೆ ಈಡಾಗಿವೆ. ಮೋದಿಯವರು ದೇಶದಲ್ಲಿ ಸರಿಯಾದ ಸಮಯಕ್ಕೆ ಲಾಕ್ ಡೌನ್ ಘೋಷಣೆ ಮಾಡಿ ಸೋಂಕು ವ್ಯಾಪಕವಾಗಿ ಹರಡದಂತೆ ತಡೆಗಟ್ಟಿದ್ದಾರೆ. ಲಾಕ್ ಡೌನ್ ನಿಂದ ಉಂಟಾದ ಆರ್ಥಿಕ ಕುಸಿತಕ್ಕೆ ಹೆದರದೆ ದೇಶದ ನಾಗರಿಕರ ಪ್ರಾಣ ರಕ್ಷಣೆಗೆ ಆದ್ಯತೆ ನೀಡಿದ್ದಾರೆ. ಸರ್ಕಾರ ಘೋಷಿಸಿರುವ 20 ಲಕ್ಷ ಕೋಟಿ ಪರಿಹಾರ ಪ್ಯಾಕೇಜ್ ರೈತರು, ಕಾರ್ಮಿಕರು, ಸಣ್ಣ ಕೈಗಾರಿಕೆಗಳಿಗೆ ಉತ್ತಜನ ನೀಡಲಿದೆ. ದೇಶದ ಒಟ್ಟು ಜಿಡಿಪಿಯ ಶೇ.10 ರಷ್ಟಾಗುವ ಈ ಅನುದಾನ ಅತಿದೊಡ್ಡ ಪರಿಹಾರದ ಪ್ಯಾಕೇಜ್ ಆಗಿದೆ. ದೇಶದಲ್ಲಿ ಸುಮಾರು 5000 ಜನರು ಕೊರೋನಾದಿಂದ ಮೃತರಾಗಿದ್ದಾರೆ. ಇದು ಬೇರೆ ದೇಶಗಳಿಗೆ ಹೋಲಿಸಿದರೆ ಕಡಿಮೆ ಇದೆ. ಕೊರೋನಾದಿಂದ ಗುಣಮುಖರಾಗುವವರ ಸಂಖ್ಯೆ ದೇಶದಲ್ಲಿ ಹೆಚ್ಚಿದೆ. ಮೋದಿಯವರ ನಾಯತ್ವ ಇರದಿದ್ದರೆ ದೇಶ ಈ ಸಂಕಷ್ಟವನ್ನು ಎದುರಿಸುವಲ್ಲಿ ವಿಫಲವಾಗುತ್ತಿತ್ತು.
ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚಿನ ಅನುದಾನ:
ಕೇಂದ್ರ ಸರ್ಕಾರದ ಜನಧನ್, ಉಜ್ವಲಾ ಆಯುಷ್ಯಮಾನ್ ಭಾರತ್, ಮುದ್ರಾ ಸ್ಟಾರ್ಟ್ ಅಪ್ ಯೋಜನಗಳ ರಾಜ್ಯದ ಜನತೆಗೆ ಹೆಚ್ಚಿನ ಲಾಭದಯವಾಗಿವೆ. ಕೇಂದ್ರ ಸರ್ಕಾರದಿಂದ 2019-20ನೇ ಸಾಲಿನಲ್ಲಿ 17,249 ಕೋಟಿ ರೂ. ಆರ್ಥಿಕ ನೆರವು, 10,079.6 ಕೋಟಿ ರೂ. ಪ್ರಾಯೋಜಿತ ಯೋಜನೆಗಳಿಗೆ ಅನುದಾನ, 1869 ಕೋಟಿ ನೆರೆ ಪರಿಹಾರ ರಾಜ್ಯ ಸರ್ಕಾರಕ್ಕೆ ಲಭಿಸಿದೆ. ರಾಜ್ಯದ ಒಟ್ಟು 49,12,445 ರೈತರು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯ ಪಲಾನುಭವಿಗಳಾಗಿದ್ದಾರೆ.
ರಾಜ್ಯದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಗೆ ಕೇಂದ್ರ ಸರ್ಕಾರ ಬೆನ್ನೆಲುಬಾಗಿದ್ದು ಕಲಬುರ್ಗಿ, ಹುಬ್ಬಳ್ಳಿ ವಿಮಾನ ನಿಲ್ದಾಣಗಳನ್ನು ಮೆಲ್ದರ್ಜೆಗೆ ಏರಿಸಲಾಗಿದೆ. ಬೆಂಗಳೂರು ಉಪನಗರ ರೈಲು ಯೋಜನೆಗೆ 18,600 ಕೋಟಿ ಬಿಡುಗಡೆ, 3085 ಕೋಟಿ ವೆಚ್ಚದಲ್ಲಿ ಬೆಳಗಾವಿ-ಧಾರವಾಡ, ಮೈಸೂರು- ಕುಶಾಲನಗರ, ಶಿಕಾರಿಪುರ- ರಾಣಿಬೆನ್ನೂರು, ದಾವಣಗೆರೆ-ಚಿತ್ರದುರ್ಗ-ತುಮಕೂರು ನೇರ ರೈಲು ಮಾರ್ಗ ನಿರ್ಮಾಣ, ಕೋಲಾರ ರೈಲ್ವೇ ವರ್ಕ್ ಶಾಪ್ ನಿರ್ಮಾಣ ಮಾಡಲಾಗುತ್ತದೆ. 2022ರ ವೇಳಗೆ ಎಲ್ಲಾ ರೈಲೂ ಮಾರ್ಗಗಳ ಡಬ್ಲಿಂಗ್, ವಿದ್ಯುದೀಕರಣ ಮಾಡಲಾಗುತ್ತಿದೆ. ಇದರಿಂದ ಹುಬ್ಬಳ್ಳಿ ಬೆಂಗಳೂರಿನ ನಡುವಿನ ಸಂಚಾರದ ಅವಧಿ 5 ಗಂಟೆ ಕಡಿಮೆಯಾಗಲಿದೆ.
ರಾಜ್ಯ ಸರ್ಕಾರ ಕೋವಿಡ್-19 ನಿಯಂತ್ರಣಕ್ಕೆ ಹಲವು ಕ್ರಮಗಳನ್ನು ಕೈಗೊಂಡಿದೆ. ಒಟ್ಟು 2272 ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ಅನ್ನು ರೈತ ಹಾಗೂ ಶ್ರಮಿಕ ವರ್ಗಗಳಿಗೆ ನೀಡಲಾಗಿದೆ. ಹೂ ಬೆಳೆಗಾರರಿಗೆ ಹೆಕ್ಟೇರ್ 25 ಸಾವಿರ, ತರಕಾರಿ ಹಾಗೂ ಹಣ್ಣು ಬೆಳೆಗಾರಿಗೆ 15 ಸಾವಿರ, ಮೆಕ್ಕೆಜೋಳ ಬೆಳಗಾರರಿಗೆ 5 ಸಾವಿರ, ಆಶಾ ಕಾರ್ಯಕರ್ತೆಯರಿಗೆ 3 ಸಾವಿರ, ವಿದ್ಯುತ್ ಚಾಲಿತ ಮಗ್ಗಗಗಳಿ ಕೆಲಸ ಮಾಡುತ್ತಿರುವವರಿಗೆ 2 ಸಾವಿರ, ನೈಸರ್ಗಿಕ ವಿಕೋಪದಲ್ಲಿ ಮೇಕೆ, ಕುರಿ, ಸಾವು ಸಂಭವಿಸಿದ್ದಲ್ಲಿ 5 ಸಾವಿರ ಪರಿಹಾರವನ್ನು ನೀಡಲಾಗುತ್ತದೆ. ಪ್ರವಾಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಬಿಡುಗಡೆ ಮಾಡುವ ಪರಿಹಾರ ಧನಕ್ಕೆ ಹೆಚ್ಚುವರಿಯಾಗಿ 10 ಸಾವಿರ ಸೇರಿಸಿ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ನೀಡುತ್ತಿದೆ ಎಂದು ಹೇಳಿದರು.
ಕಳಸ ಬಂಡೂರಿ:
ಉತ್ತರ ಕರ್ನಾಟಕ ಭಾಗದ ಬಹುದಿನದ ಬೇಡಿಕೆಯಾದ ಕಳಸ ಬಂಡೂರಿ ಯೋಜನೆಗೆ ಸುಪ್ರಿಂ ಕೋರ್ಟ್ ಅನುಮತಿ ನೀಡಿದೆ. ಇದರ ಆಧಾರದ ಮೇಲೆ ರಾಜ್ಯ ಸರ್ಕಾರ 500 ಕೋಟಿ ರೂಪಾಯಿಗಳನ್ನು ಯೋಜನೆಗಾಗಿ ಕಾಯ್ದಿರಿಸಿದೆ. ಡೋಣಿ, ಬೆಣ್ಣಿ ಹಾಗೂ ತುಪ್ಪರಿಹಳ್ಳಗಳ ಬೃಹತ್ ನೀರಾವರಿ ಯೋಜನೆಗಳಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಹೇಳಿದರು.
ಆಸ್ತಿ ತೆರಿಗೆ ಹೆಚ್ಚಳ:
ನಿಯಮಾನುಸಾರ ಹುಬ್ಬಳ್ಳಿ ಧಾರವಾಡ ಕಾರ್ಪೋರೇಷನ್ ವ್ಯಾಪ್ತಿಯ ಆಸ್ತಿ ತೆರಿಗೆ ಹೆಚ್ಚಳ ಮಾಡಲಾಗಿದೆ. ಗೃಹ ಮತ್ತು ಇತರೆ ಆಸ್ತಿಗಳ ತೆರಿಗೆಯನ್ನು ಶೇ.15, ವಾಣಿಜ್ಯ ಮಳಿಗೆ ಹಾಗೂ ವ್ಯಾಪಾರ ಸ್ಥಳ ತೆರಿಗೆಯನ್ನು ಶೇ.25 ವರಗೆ ಹೆಚ್ಚಿಸಲಾಗಿದೆ. ಅಕ್ಟೋಬರ್ ಮಾಹೆಯ ಅಂತ್ಯದ ಒಳಗೆ ಆಸ್ತಿ ತೆರಿಗೆ ತುಂಬಿದರೆ ಶೇ.5ರಷ್ಟು ರೆಬಿಟ್ ಲಭಿಸಲಿದೆ. ಅವಳಿ ನಗರದ 24*7 ನೀರಿನ ಯೋಜನಯನ್ನು ವಿಶ್ವಬ್ಯಾಂಕ್ ನೆರವಿನೊಡನೆ ಅನುಷ್ಠಾನ ಗೊಳಿಸಲಾಗುತ್ತಿದೆ. ಯೋಜನೆಗೆ 1200 ಸಾವಿರ ಕೋಟಿ ರೂಪಾಯಿ ಒದಗಿಸಲಾಗಿದ್ದು ಮುಂದಿನ ಒಂದುವರೆ ವರ್ಷದ ಒಳಗಾಗಿ ಯೋಜನೆ ಪೂರ್ಣಗೊಳಿಸಲಾಗುವುದು. ಅಮೃತ್ ಯೋಜನೆಯ 2 ನೇ ಹಂತದಲ್ಲಿ ಪೂರ್ಣಗೊಳಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಶಾಸಕರಾದ ಶಂಕರ ಪಾಟೀಲ್ ಮುನೇಕೊಪ್ಪ, ಪ್ರದೀಪ್ ಶೆಟ್ಟರ್, ವಿ.ಎಸ್.ಸಂಕನೂರ, ಅಮೃತ ದೇಸಾಯಿ, ಹುಡಾ ಅಧ್ಯಕ್ಷ ಮಹೇಶ್ ಕಲಬುರ್ಗಿ, ಸೇರಿದಂತೆ ಮತ್ತಿತರು ಉಪಸ್ಥಿರಿದ್ದರು.