ಬೆಳಗಾವಿ: ಒಂದು ತಿಂಗಳಾದರೂ ಬಿ.ಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿ ಮುಂದುವರಿದರೆ ಒಳ್ಳೆಯದು ಎಂದು ಖಾನಾಪುರ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಪರೋಕ್ಷವಾಗಿ ಹೇಳಿದ್ದಾರೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ವೇಳೆ ಸಿಎಂ ಬದಲಾವಣೆ ಬಗ್ಗೆ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಈ ಪರಿಸ್ಥಿತಿಯಲ್ಲಿ ಬಿಜೆಪಿ ಸಿಎಂ ಬದಲಾವಣೆ, ಮಂತ್ರಿ ಯಾರನ್ನು ಮಾಡಬೇಕು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಅವರನ್ನು ದೇವರೇ ಕಾಪಾಡಬೇಕು ಎಂದರು.
ಆಪರೇಷನ್ ಕಮಲ ಮಾಡಿ ಜನಾಶೀರ್ವಾದ ಮೀರಿ ಸರ್ಕಾರ ಮಾಡಿದರು. ಜನರ ಬಗ್ಗೆ ಬಿಜೆಪಿಯವರಿಗೆ ಕಾಳಜಿ ಇಲ್ಲ. ಇಂತಹ ಸಂದರ್ಭಗಳಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಆಗ್ತಿದೆ, ಬಹಳ ದುಃಖದ ಪರಿಸ್ಥಿತಿ ಇದೆ. ನಾಯಕತ್ವ ಬದಲಾವಣೆ ವಿಚಾರ ಬಿಜೆಪಿಗೆ ಬಿಟ್ಟಿದ್ದು. ಆದರೆ ಇಂತಹ ಪರಿಸ್ಥಿತಿಯಲ್ಲಿ ಇವರೇ ಒಂದು ತಿಂಗಳು ಸಿಎಂ ಆಗಿ ಮುಂದುವರಿದ್ರೆ ಪರಿಹಾರ ಬೇಗ ಕೊಡಲು ಸಾಧ್ಯವಿದೆ ಎಂದು ಹೇಳಿದರು.
ಕಡೇಪಕ್ಷ ಒಂದು ತಿಂಗಳು ಈಗಿನವರೇ ಸಿಎಂ ಆಗಿ ಮುಂದುವರಿದ್ರೆ ಒಳ್ಳೆಯದು. ಹೊಸ ಸಿಎಂ ಬಂದ್ಮೇಲೆ ಅಧಿಕಾರಿಗಳಿಗೆ ನಿರ್ದೇಶನ ಕೊಡಲು ಮತ್ತೆ ಲೇಟ್ ಆಗುತ್ತದೆ. ಜನರ ಪರವಾಗಿ ಬಿಜೆಪಿ ಹೈಕಮಾಂಡ್ ನಿರ್ಧಾರ ಮಾಡ್ತಾರೋ ಇಲ್ವೋ ಗೊತ್ತಿಲ್ಲ ಅದು ಅವರ ಪಕ್ಷದ ವಿಷಯ. ನನಗೆ ಈ ಬಗ್ಗೆ ಮಾತನಾಡಲು ಅಧಿಕಾರ ಇಲ್ಲ. ಆದರೆ ಜನರ ಪರ ತೀರ್ಮಾನ ಕೈಗೊಳ್ಳಬೇಕು ಅಂತ ಒಂದು ಆಸೆ ಇದೆ ಎಂದು ತಿಳಿಸಿದರು. ಇದನ್ನೂ ಓದಿ: ರಣ ಮಳೆಗೆ ಮಹಾರಾಷ್ಟ್ರದಲ್ಲಿ 100 ಮಂದಿ ಬಲಿ- 1,000ಕ್ಕೂ ಹೆಚ್ಚು ಮಂದಿ ಸ್ಥಳಾಂತರ
ಇದೇ ವೇಳೆ ಖಾನಾಪುರ ತಾಲೂಕಿನಲ್ಲಿ ಧಾರಾಕಾರ ಮಳೆ ವಿಚಾರ ಸಂಬಂಧ ಮಾತನಾಡಿ, 2019ರಲ್ಲೂ ಇದೇ ರೀತಿ ಪ್ರವಾಹ ಬಂದಿತ್ತು, ಈಗಾಗಲೇ ಖಾನಾಪುರದಲ್ಲಿ 521 ಮಿ.ಮೀ ಮಳೆಯಾಗಿದೆ. ಆಗಸ್ಟ್‍ನಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇತ್ತು, ಈಗಾಗಲೇ ಆಗಿಬಿಟ್ಟಿದೆ ಎಂದರು. ಇದನ್ನೂ ಓದಿ:ಶ್ವಾನದ ಸವಿನೆನಪಿಗೆ ಕಂಚಿನ ಪ್ರತಿಮೆ – ಬಿಡಿಸಲಾಗದ ಮಾಲೀಕ, ಶ್ವಾನದ ನಂಟು
ಜಿಲ್ಲಾ ಉಸ್ತುವಾರಿ ಸಚಿವ ಡಿಸಿಎಂ ಗೋವಿಂದ ಕಾರಜೋಳ ಜೊತೆ ಚರ್ಚೆ ನಡೆಸುತ್ತೇನೆ. ಮಳೆಯಿಂದ ಆದ ಹಾನಿಗೆ ಆದಷ್ಟು ಬೇಗ ಪರಿಹಾರ ನೀಡಲು ಮನವಿ ಮಾಡುತ್ತೇನೆ. ದುರ್ಗಾನಗರ, ಪೊಲೀಸ್ ತರಬೇತಿ ಕೇಂದ್ರ ಜಲಾವೃತ ಆಗಿದೆ. ಇನ್ನೂ ಮೂರು ದಿನ ಇದೇ ರೀತಿ ಮಳೆಯಾದ್ರೆ ಪರಿಸ್ಥಿತಿ ಬಿಗಡಾಯಿಸುತ್ತೆ. ನನ್ನ ಮನೆಯೂ ಸಂಪೂರ್ಣ ಜಲಾವೃತಗೊಂಡಿದೆ, ಕಳೆದ ವರ್ಷ ನನ್ನ ಮನೆಯ ಮೊದಲ ಮಹಡಿವರೆಗೆ ನೀರು ಬಂದಿತ್ತು. ಪರಿಹಾರ ಕೇಂದ್ರ ವ್ಯವಸ್ಥೆ ಬಗ್ಗೆ ತಾಲೂಕು ಅಧಿಕಾರಿಗಳ ಜೊತೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದರು.
ಮಳೆಯಿಂದ ಹಲವು ರಸ್ತೆಗಳು ಜಲಾವೃತಗೊಂಡು ಸಂಪರ್ಕ ಕಡಿತವಾಗಿದೆ. ಖಾನಾಪುರ ತಾಲೂಕಿನಲ್ಲಿ ಹೊಲಕ್ಕೆ ಹೋಗಿದ್ದ ರೈತ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದಾರೆ. ರೈತನ ಮೃತದೇಹ ಮರಣೋತ್ತರ ಪರೀಕ್ಷೆಗೆ ಆಸ್ಪತ್ರೆಗೆ ಕರೆ ತರಲು ಆಗ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಮೃತದೇಹ ಮನೆಯಲ್ಲಿ ಇಟ್ಟುಕೊಳ್ಳಲಾಗಲ್ಲ. ಈ ವರ್ಷವಾದರೂ ಸರ್ಕಾರ ಬೇಗ ಪರಿಹಾರ ಬೇಗ ಕೊಡಬೇಕು ಅಂತಾ ವಿನಂತಿ ಮಾಡ್ತೇನೆ ಎಂದರು.