– ಲಾಕ್‍ಡೌನ್ ನಿಂದ ಕೆಲಸ ಕಳೆದುಕೊಂಡಿದ್ದ ಮಹಿಳೆ ಪತಿ
ಬೆಂಗಳೂರು: ಬಾಡಿಗೆ ಕೊಡದ್ದಕ್ಕೆ ತನ್ನ ಬಾಡಿಗೆದಾರ ಮಹಿಳೆಗೆ ಮನೆಯ ಯಜಮಾನಿ ಚಾಕುವಿನಿಂದ ಇರಿದಿರುವ ಆಘಾತಕಾರಿ ಘಟನೆ ರಾಜಗೋಪಾಲ ನಗರದಲ್ಲಿ ನಡೆದಿದೆ.
ಪೂರ್ಣಿಮಾ(28) ಅವರು 24,000 ರೂ, ಬಾಡಿಗೆ ಬಾಕಿ ಉಳಿಸಿಕೊಂಡಿದ್ದರು. ಇದನ್ನು ಕೊಡದ್ದಕ್ಕೆ ಸಿಟ್ಟಿಗೆದ್ದ ಮನೆಯ ಯಜಮಾನಿ ಜಾಕು ಇರಿದಿದ್ದಾಳೆ. ಸದ್ಯ ಪೂರ್ಣಿಮಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಲಗ್ಗೆರೆಯ ಮಾರುತಿ ನಗರದ ಯಜಮಾನಿ ಕೆ.ಮಹಾಲಾಕ್ಷ್ಮಿಯನ್ನು ಪೊಲೀಸರು ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಸಿದಂತೆ ಬಂಧಿಸಿದ್ದಾರೆ. ಮಹಿಳೆಯನ್ನು ಇದೀಗ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಘಟನೆ ಹೇಗೆ ನಡೀತು?
ಪೂರ್ಣಿಮಾ ಹಾಗೂ ಪತಿ ರವಿಚಂದ್ರ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಮಹಾಲಕ್ಷ್ಮಿ ಅವರ ಸಿಂಗಲ್ ಬೆಡ್ ರೂಮ್ ಮನೆಯಲ್ಲಿ ಒಂದು ವರ್ಷದಿಂದ ವಾಸವಾಗಿದ್ದಾರೆ. ಮನೆಗೆ 65 ಸಾವಿರ ರೂ. ಮುಂಗಡ ಹಣವನ್ನು ಸಹ ನೀಡಿದ್ದಾರೆ. ಪ್ರತಿ ತಿಂಗಳು 6,000 ಬಾಡಿಗೆಯನ್ನೂ ನೀಡಿದ್ದಾರೆ. ಆದರೆ ಕೊರೊನಾ ವೈರಸ್ ಲಾಕ್‍ಡೌನ್‍ನಿಂದಾಗಿ ಪೂರ್ಣಿಮಾ ಪತಿ ತನ್ನ ಸೇಲ್ಸ್ ಎಕ್ಸಿಕ್ಯೂಟಿವ್ ಕೆಲಸವನ್ನು ಮೇನಲ್ಲಿ ಕಳೆದುಕೊಂಡಿದ್ದಾರೆ. ಪೂರ್ಣಿಮಾ ಆರಂಭದಲ್ಲಿ ಮನೆಯಲ್ಲೇ ಇರುತ್ತಿದ್ದರು. ಆದರೆ ಇತ್ತೀಚೆಗೆ ಬೇರೆ ಕಂಪನಿಗೆ ಕೆಲಸಕ್ಕೆ ಸೇರಿದ್ದಾರೆ.
ಈ ವೇಳೆ ಅವರಿಗೆ ಹಣದ ಬಿಕ್ಕಟ್ಟು ಉಂಟಾಗಿದ್ದು, ರವಿಚಂದ್ರ ಅವರು ನಾಲ್ಕು ತಿಂಗಳಿಂದ ಬಾಡಿಗೆ ಪಾವತಿಸಿಲ್ಲ. ಶುಕ್ರವಾರ ರಾತ್ರಿ ಆರೋಪಿ ಮಹಾಲಕ್ಷ್ಮಿ ಬಾಡಿಗೆ ಕೇಳಲು ಪೂರ್ಣಿಮಾ ಮನೆಗೆ ಹೋಗಿದ್ದಾರೆ. ಈ ವೇಳೆ ದಂಪತಿ ಇನ್ನೊಂದು ತಿಂಗಳು ಕಾಯಿರಿ ಎಂದು ಮನವಿ ಮಾಡಿದ್ದಾರೆ. ಆದರೆ ಮಹಾಲಕ್ಷ್ಮಿ ಇದಾವುದನ್ನೂ ಕೇಳದೆ ಬಾಡಿಗೆ ಕೊಡದಿದ್ದರೆ ಮನೆಯಿಂದ ಹೊರಗಡೆ ಹೋಗಿ ಎಂದು ಕೂಗಾಡಿದ್ದಾಳೆ. ಆಗ ಬಾಕಿ ಇರುವ ಬಾಡಿಗೆಯನ್ನು ಮುಂಗಡ ಹಣದಲ್ಲೇ ತೆಗೆದುಕೊಳ್ಳಿ ಎಂದು ಪೂರ್ಣಿಮಾ ಹೇಳಿದ್ದಾರೆ. ಆದರೆ ಮಹಾಲಕ್ಷ್ಮಿ ಇದಾವುದನ್ನೂ ಕೇಳದೆ, ಮುಂಗಡ ಹಣವನ್ನು ಚೀಟಿ ಹಾಕಿರುವುದಾಗಿ ಹೇಳಿದ್ದಾಳೆ.
ಆಗ ಪೂರ್ಣಿಮಾ ಅಸಹಾಯಕಳಾಗಿದ್ದು, ಇತ್ತ ಮಹಾಲಕ್ಷ್ಮಿ ತನ್ನ ತಾಳ್ಮೆಯನ್ನು ಕಳೆದುಕೊಂಡಿದ್ದಾಳೆ. ಈ ವೇಳೆ ದಿಡೀರನೇ ಅಡುಗೆ ಮನೆಗೆ ಓಡಿ ಹೋಗಿದ್ದಾಳೆ. ಅಲ್ಲಿದ್ದ ಚಾಕುವನ್ನು ತಂದು ಪೂರ್ಣಿಮಾಳ ಕೈ ಹಾಗೂ ಕುತ್ತಿಗೆಗೆ ಇರಿದಿದ್ದಾಳೆ. ಈ ವೇಳೆ ರವಿಚಂದ್ರ ಮಧ್ಯಪ್ರವೇಶಿಸಿದ ಬಳಿಕ ನಿಲ್ಲಿಸಿ, ಓಡಿ ಹೋಗಿದ್ದಾಳೆ.
ಈ ಕುರಿತು ಪೊಲೀಸರು ಮಾಹಿತಿ ನೀಡಿದ್ದು, ಘಟನೆ ನಡೆದ ರಾತ್ರಿಯೇ ಮಹಾಲಕ್ಷ್ಮಿಯನ್ನು ಬಂಧಿಸಿದ್ದೇವೆ. ಮಹಿಳಾ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಿದ್ದೇವೆ. ಶನಿವಾರವೇ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.