ಮಡಿಕೇರಿ: ಜಿಲ್ಲೆಯಲ್ಲಿ ಮೂರು ವರ್ಷಗಳಿಂದಲೂ ನಿರಂತರವಾಗಿ ಸುರಿಯುತ್ತಿರುವ ರಣಭೀಕರ ಮಳೆಗೆ ಪ್ರವಾಹ ಮತ್ತು ಭೂಕುಸಿತ ಸಂಭವಿಸಿದೆ. ಮೂರು ವರ್ಷದಲ್ಲೂ ರೈತರು ಅಪಾರ ನಷ್ಟ ಅನುಭವಿಸಿದ್ದಾರೆ. ಆದರೆ ಇದೀಗ ಒಂದು ತಿಂಗಳ ಅವಧಿಯಲ್ಲಿ ಮೂರು ಬಾರಿ ಸುರಿದ ಮಳೆಗೆ ಜಿಲ್ಲೆಯ ರೈತರು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ.
Advertisement
ಆಗಸ್ಟ್ 5ರಿಂದ ಸೆಪ್ಟೆಂಬರ್ 20ರ ವರೆಗೆ ಒಂದೂವರೆ ತಿಂಗಳ ಅವಧಿಯಲ್ಲಿ ಮೂರು ಬಾರಿ ಧಾರಕಾರ ಮಳೆ ಸುರಿದಿದ್ದು, ರೈತರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಕೊರೊನಾ ಲಾಕ್‍ಡೌನ್ ನಿಂದ ವ್ಯಾಪಾರದಲ್ಲೂ ನಷ್ಟ ಅನುಭವಿಸಿ, ಕೃಷಿಯತ್ತ ಮುಖ ಮಾಡಿದ್ದವರು ಪ್ರವಾಹದಿಂದ ಕೃಷಿಯಲ್ಲೂ ನಷ್ಟ ಅನುಭವಿಸುವಂತಾಗಿದೆ.
Advertisement
ಜುಲೈ ಅಂತ್ಯದಲ್ಲೇ ಭತ್ತ ಬೆಳೆ ನಾಡಿ ಮಾಡಿದ್ದೆವು. ಆಗಸ್ಟ್ ಆರಂಭದಲ್ಲಿ ಸುರಿದ ಮಳೆಯಿಂದ ಭತ್ತದ ಪೈರೆಲ್ಲಾ ಕೊಚ್ಚಿ ಹೋಯಿತು. ಮತ್ತೆ ನಾಟಿ ಮಾಡಿದ್ದೆವು, ಆಗಸ್ಟ್ ಕೊನೆಯಲ್ಲಿ ಸುರಿದ ಭಾರೀ ಮಳೆಗೆ ಆಗೊಮ್ಮೆ ಬೆಳೆ ನಷ್ಟವಾಯಿತು. ಇದೀಗ ಸುರಿದ ಮಳೆಗೆ ಮತ್ತೆ ನಷ್ಟ ಅನುಭವಿಸಿದ್ದೇವೆ. ಆಗಸ್ಟ್ ನಲ್ಲಿ ಪ್ರವಾಹದ ನೀರು ನುಗ್ಗಿ ಕಾಫಿಗೆ ಕೊಳೆರೋಗ ಬಂದು ಕರಗಿ ಹೋಗಿತ್ತು. ಉಳಿದ ಗಿಡಗಳಲ್ಲಿ ಅಲ್ಪ ಪ್ರಮಾಣದ ಕಾಫಿ ಇತ್ತು. ಇದೀಗ ಮತ್ತೆ ಸುರಿದ ಮಳೆಗೆ ಉಳಿದಿದ್ದ ಕಾಫಿಯೂ ಕರಗಿ ನೆಲಕಚ್ಚುತ್ತಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
Advertisement
Advertisement
ಆಗಸ್ಟ್ ತಿಂಗಳಲ್ಲಿ ಸುರಿದಿದ್ದ ಮಳೆಗೆ ಪ್ರವಾಹ ಮತ್ತು ಭೂಕುಸಿತವಾಗಿತ್ತು. ಐದು ಜನರು ಪ್ರಾಣಕಳೆದುಕೊಂಡು, 600 ಕೋಟಿಯಷ್ಟು ಮೂಲಸೌಲಭ್ಯದ ನಷ್ಟವಾಗಿತ್ತು. ಜೊತೆಗೆ 41 ಸಾವಿರ ಹೆಕ್ಟೇರ್ ನಷ್ಟು ವಿವಿಧ ಬೆಳೆಗಳು ಹಾಳಾಗಿದ್ದವು. ರೈತರಿಗೆ ಪರಿಹಾರ ನೀಡಲು ಸೆಪ್ಟೆಂಬರ್ 15 ರವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದೀಗ ಜಿಲ್ಲೆಯಲ್ಲಿ ಮತ್ತೆ ಭಾರೀ ಮಳೆ ಸುರಿದಿದ್ದರಿಂದ ಮೂಲಸೌಲಭ್ಯಗಳು ಹಾಳಾಗಿಲ್ಲ. ಆದರೆ ರೈತರ ಭತ್ತ ಮತ್ತು ಕಾಫಿ ಬೆಳೆಗಳು ಭಾರೀ ನಷ್ಟ ಆಗಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ ಅರ್ಜಿ ಸಲ್ಲಿಸಲು ಇದ್ದ ದಿನಾಂಕವನ್ನು ಸೆಪ್ಟೆಂಬರ್ 30ರ ವರೆಗೆ ವಿಸ್ತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.
ಸರ್ಕಾರ ಪರಿಹಾರ ಕೊಟ್ಟರೂ ರೈತರು ಬೆಳೆಗಾಗಿ ವ್ಯಯಿಸಿದಷ್ಟು ಹಣ ನೀಡುವುದಿಲ್ಲ. ಹೀಗಾಗಿ ಈ ವರ್ಷದಲ್ಲಿ ರೈತರು ಒಂದೂವರೆ ತಿಂಗಳಲ್ಲೇ ಮೂರು ಬಾರಿ ನಷ್ಟ ಅನುಭವಿಸಿದಂತಾಗಿದೆ.